ಪಿರಿಯಾಪಟ್ಟಣದ ಜನ, ಜಾನವಾರು, ಕೃಷಿಯ ಅನುಕೂಲಕ್ಕಾಗಿ ಮತ್ತು ಇಲ್ಲಿನ ಅಂತರ್ಜಲ ಹೆಚ್ಚಳಕ್ಕೆ ನಾನೇ ಶಂಕುಸ್ಥಾಪನೆ ಮಾಡಿ ನಾನೇ ಈಗ ಈ ಯೋಜನೆಯನ್ನು ಉದ್ಘಾಟಿಸಿದ್ದೇನೆ. 79 ಹಳ್ಳಿ 93 ಸಾವಿರ ಜನರಿಗೆ ಇದರಿಂದ ಲಾಭ ಆಗುತ್ತಿದೆ. ಇದು ನಮ್ಮ ಸರ್ಕಾರ ಪಿರಿಯಾಪಟ್ಟಣದಲ್ಲಿ ನಿರ್ವಹಿಸಿದ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ 79 ಗ್ರಾಮಗಳ 150 ಕೆರೆ – ಕಟ್ಟೆಗಳಿಗೆ ಕಾವೇರಿ ನದಿಯ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸರ್ಕಾರದ ಒಂದು ಯೋಜನೆ ಕೋಲಾರ, ಚಿಕ್ಕಬಳ್ಳಾಪುರದ ಕೆರೆಗಳಿಗೆ ಮರು ಹುಟ್ಟು ನೀಡಿದೆ. ಇದೇ ರೀತಿ ಪಿರಿಯಾಪಟ್ಟಣದ ಕೆರೆಗಳಿಗೆ ಮರು ಜೀವ ನೀಡಿ ಇಲ್ಲಿನ ಅಂತರ್ಜಲ ವೃದ್ಧಿಗೆ ಈ ಯೋಜನೆ ಜೀವದಾನವಾಗಲಿದೆ ಎಂದು ಹೇಳಿದರು.
ನುಡಿದಂತೆ ನಡೆಯೋದು, ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ನಮ್ಮ ಸರ್ಕಾರದ ಸಂಸ್ಕಾರ. ಬಿಜೆಪಿ ಕೊಟ್ಟ ಮಾತುಗಳಲ್ಲಿ ಯಾವುದನ್ನೂ ಈಡೇರಿಸಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲ ಇದ್ದರೂ ಜನ ಜಾನವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ, ಜನರು ಗುಳೆ ಹೋಗದಂತೆ ತಡೆದಿದ್ದೇವೆ. ಇದು ನಮ್ಮ ಸಾಧನೆ ಎಂದು ತಿಳಿಸಿದರು.
ಕಳೆದ ವರ್ಷ ಸೆಪ್ಟೆಂಬರ್ ನಿಂದ ಇವತ್ತಿನವರೆಗೂ ನಾವು ರಾಜ್ಯದ ಪಾಲಿನ ಬರ ಪರಿಹಾರದ ಹಣವನ್ನು ಕೊಡಿ ಎಂದು ಪತ್ರ ಬರೆಯುತ್ತಿದ್ದೇವೆ. ನಾವೇ ಖುದ್ದಾಗಿ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿದರೂ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿಯನ್ನು ರಾಜ್ಯಕ್ಕೆ ನೀಡಿಲ್ಲ ಎಂದರು.
ರಾಜ್ಯದ ಜನ ಪ್ರತಾಪ್ ಸಿಂಹ ಸೇರಿ 25 ಮಂದಿ ಎಂಪಿಗಳನ್ನು ಗೆಲ್ಲಿಸಿದರು. ಒಬ್ಬೇ ಒಬ್ಬ ಬಿಜೆಪಿ ಸಂಸದರು ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಬರ ಪರಿಹಾರ ತರಲಿಲ್ಲ, “ಮಿಸ್ಟರ್ ಪ್ರತಾಪ್ ಸಿಂಹ ಏಕೆ ಒಂದೇ ಒಂದು ರೂಪಾಯಿ ತರಲಿಲ್ಲ. ಇಷ್ಟು ಎಂಪಿಗಳಿದ್ದು ನಾಚಿಕೆ ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು ಈಗ ಪ್ರದಾನಿ ಮೋದಿ ಮತ್ತು ಬಿಜೆಪಿ ಜತೆ ತಮ್ಮ ಅಸ್ತಿತ್ವಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರಧಾನಿಗಳಿಗೆ ಹೇಳಿ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಬರ ಪರಿಹಾರವನ್ನು ದೊರಕಿಸಿ ಕೊಡಲಿ. ಜಾತ್ಯತೀತ ಎಂದು ಪಕ್ಷದ ಹೆಸರಿಟ್ಟುಕೊಂಡು ಈಗ ಕೋಮುವಾದಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀವಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅದರಲ್ಲಿ ವಿಫಲರಾದರು. ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಕೊಡಬೇಕಿತ್ತು. ಆಗಲಿಲ್ಲ, ಈ ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನನ್ನು ಮುಂದಿಡುತ್ತಿದ್ದಾರೆ ಎಂದು ಟೀಕಿಸಿದರು.
ಮಹಾತ್ಮಗಾಂಧಿ ಹೇಳಿದ ರಘು ಪತಿ ರಾಘವ ರಾಜಾರಾಮನನ್ನು ನಾವು ಪೂಜಿಸುತ್ತೇವೆ, ನಾವೂ ರಾಮನನ್ನು ಭಜಿಸುತ್ತೇವೆ. ಜನದ್ರೋಹವನ್ನು ಬಚ್ಚಿಟ್ಟುಕೊಳ್ಳಲು ಶ್ರೀರಾಮನನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯನ್ನು ಕ್ಷಮಿಸಬೇಡಿ, ಬೆಂಬಲಿಸಬೇಡಿ ಎಂದು ಹೇಳಿದರು.