“ಸತ್ಯ, ಧರ್ಮ, ನ್ಯಾಯದ ಹಾದಿಯಲ್ಲಿ ನಡೆಯುವವರು ಯಾವತ್ತಿಗೂ ಭಯಪಡಲಾರರು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ, ರಾಹುಲ್ ಗಾಂಧಿ ಅವರ ಜೊತೆ ನಾನಿದ್ದೇನೆ, ನನ್ನಂತಹ ಕೋಟ್ಯಂತರ ಭಾರತೀಯರಿದ್ದಾರೆ. ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವವರೆಗೆ ನಾವು ವಿರಮಿಸುವುದಿಲ್ಲ ಎಂದು ಸವಾಲು ಹಾಕಿದ್ದಾರೆ.
ದ್ವೇಷ, ಹಿಂಸೆ, ಅಧರ್ಮ, ಅಸತ್ಯಗಳನ್ನು ತಿರಸ್ಕರಿಸಿರುವ, ಸೌಹಾರ್ದ ಭಾರತ ಬಯಸುವ ಕೋಟ್ಯಂತರ ಮನಸುಗಳು ನಮ್ಮ ಜೊತೆಗಿವೆ. ಬುದ್ಧ, ಬಸವ, ಅಂಬೇಡ್ಕರರು ನಡೆದಾಡಿದ ಈ ನೆಲದಲ್ಲಿ ಪ್ರೀತಿ, ಬಾಂಧವ್ಯಕ್ಕೆ ಸಾವಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ ಎಂದು ತಿಳಿಸಿದ್ದಾರೆ.
ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಭಾರತ ಐಕ್ಯತಾ ನ್ಯಾಯ ಯಾತ್ರೆಗೆ ಮೇಘಾಲಯದ ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಭಾರತದ ಭವಿಷ್ಯದ ಸೂಚಕದಂತಿದೆ ಎಂದಿದ್ದಾರೆ.
ಪ್ರತಿ ಭಾರತೀಯನಿಗೂ ಸಿಗಬೇಕಿರುವ ನ್ಯಾಯವನ್ನು ಕೊಡಿಸುವುದೇ ಭಾರತ ಐಕ್ಯತಾ ನ್ಯಾಯ ಯಾತ್ರೆಯ ಮೂಲ ಉದ್ದೇಶ. ಈ ದೇಶದ ಯುವಜನರಿಗೆ, ಮಹಿಳೆಯರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ನ್ಯಾಯದ ಭಾರತ ನಿರ್ಮಾಣ ಕಾರ್ಯದಲ್ಲಿ ನಮ್ಮ ಜೊತೆಯಾಗಿರುವ ಭಾಗೀದಾರರಿಗೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಇನ್ನೊಂದು ತಿಂಗಳಲ್ಲಿ ಅದನ್ನು ತಮ್ಮೆದುರು ಪ್ರಸ್ತುತಪಡಿಸಲಿದೆ ಎಂದು ಹೇಳಿದ್ದಾರೆ.


