ಕುಣಿಗಲ್ ಕುದುರೆ ಪಾರಂ ನಲ್ಲಿ ರಾಜ್ಯ ರ‍್ಕಾರ ಇಂಟಿಗ್ರೇಟೆಡ್ ಟೌನ್ ಶಿಪ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಪಾರಂಪರಿಕ ಕುಣಿಗಲ್ ಕುದುರೆ ಫಾರಂ ಉಳುವಿಗಾಗಿ ಹೋರಾಟ ಸಮಿತಿ ಅಧ್ಯಕ್ಷ ಜಿ.ಕೆ.ನಾಗಣ್ಣ ಆಗ್ರಹಿಸಿದ್ದಾರೆ.
ಕುಣಿಗಲ್ ಕುದುರೆ ಎಂದು ಖ್ಯಾತಿ ಪಡೆದು ವಿಶ್ವಕ್ಕೆ ಉತ್ತಮ ತಳಿಯ ಕುದುರೆಗಳನ್ನು ನೀಡಿರುವ ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು. ಕುಣಿಗಲ್ ಕುದುರೆ ಪಾರಂ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕುದುರೆ ಪಾರಂ ನ ಜಾಗದಲ್ಲಿ ಯಾವುದೇ ಕೈಗಾರಿಕೆ, ವಾಣಿಜ್ಯ ಉದ್ದೇಶದ ಕಟ್ಟಡ ಕಟ್ಟಲು ಜಾಗ ಮಂಜೂರು ಮಾಡಬಾರದು. ಟಿಪ್ಪು ಸುಲ್ತಾನ್ ಕಾಲದಲ್ಲಿ ಆದುನಿಕ ಮತ್ತು ವೈಜ್ಞಾನಿಕವಾಗಿ ಜರ‍್ಣೋದ್ಧಾರವಾಗಿ ಇಂದಿಗೆ ಸುಮಾರು 250 ವರ್ಷಗಳಾಗಿದ್ದು ಈಗಲೂ
ಅಸ್ತಿತ್ವದಲ್ಲಿರುವುದರಿಂದ ಸರ್ಕಾರ ಕುಣಿಗಲ್ ಕುದುರೆ ಪಾರಂ ಅನ್ನು ಭಾರತದ ಪಾರಂಪರಿಕ ಸ್ಥಳ ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿರುವ ಹೋರಾಟ ಸಮಿತಿಯ ಹೋರಾಟಕ್ಕೆ ಸಾಹಿತಿಗಳು, ಹೋರಾಟಗಾರರು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಕುಣೆಗಲ್ ಕುದುರೆ ಪಾರಂ ಐತಿಹಾಸಿಕ ಹಿನ್ನೆಲೆ ಉಳ್ಳದ್ದಾಗಿದ್ದು. ಕರ್ನಾಟಕವನ್ನು ಹಲವು ವರ್ಷಗಳ ಕಾಲ ಆಳ್ವಿಕೆ ಮಾಡಿದ ಗಂಗರು ಯುದ್ದದಲ್ಲಿ ದಣಿದ ಕುದುರೆ, ಆನೆ ಮತ್ತು ಸೈನಿಕರು ಇಲ್ಲಿ ಬೀಡು ಬಿಟ್ಟು ವಿಶ್ರಾಂತಿ ಪಡೆಯುತ್ತಿದ್ದರು . ಕಾರಣ ದಕ್ಷಿಣ ಮತ್ತು ಉತ್ತರ ಕರ್ನಾಟಕ ಪ್ರಾಂತ್ಯವನ್ನು ಬೆಸೆಯುವ ರಸ್ತೆ ಇದಾಗಿದ್ದು ಕುಣಿಗಲ್ ಪಟ್ಟಣದ ಎಡ-ಬಲ ಗಳಲ್ಲಿ ಸುತ್ತುವರೆದಿರುವ ದೊಡ್ಡ ಕೆರೆ ಮತ್ತು ಚಿಕ್ಕಕೆರೆ ನಡುವಿನ ಭೂ ಭಾಗ ಬಹಳ ಫಲವತ್ತಾಗಿದೆ. ಔಷಧಿಗುಣವುಳ್ಳ ಸಸ್ಯ ಮತ್ತು ಮರಗಳಿಂದ ಕೂಡಿದ್ದು ವಿಶ್ರಾಂತಿಗೆ ಉತ್ತಮ ಸ್ಥಳವಾಗಿದ್ದರಿಂದ ಇಲ್ಲಿ ಬೀಡು ಬಿಡುತ್ತಿದ್ದರು ಎಂಬ ಐತಿಹ್ಯವಿದೆ ಎಂದಿದ್ದಾರೆ.
ಕಾಲಾನಂತರದಲ್ಲಿ ಇದೇ ಪರಂಪರೆ ಮುಂದುವರಿದು 1660-1699 ಅವಧಿಯಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಈ ಸ್ಥಳವನ್ನು ಅಭಿವೃದ್ಧಿಪಡಿಸಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಲು ಉತ್ತಮ ತಳಿಯ ಕುದುರೆಗಳನ್ನು ಸಾಕಲು ಪ್ರಾರಂಭಿಸಿದರು.
ಟಿಪ್ಪು ಕಾಲದಲ್ಲಿ ಆದುನಿಕ ರೀತಿಯಲ್ಲಿ ಜರ‍್ಣೋದ್ಧಾರಗೊಂಡು ನಂತರ ಮೈಸೂರು ರಾಜ ಮನೆತನದ ಕಾಲಘಟ್ಟದಲ್ಲಿ ಮತ್ತಷ್ಠು ಸುಧಾರಣೆಗೊಂಡು ಇಲ್ಲಿಗೆ ಸರಿ ಸುಮಾರು 250 ವರ್ಷಗಳ ಇತಿಹಾಸ ಇದೆ ಎಂದಿದ್ದಾರೆ.
ಸರ್ಕಾರದ ನಿರ್ಧಾರದಿಂದ ಪಾರಂಪರಿಕ ಕುದುರೆ ಪಾರಂ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿರುವ ಕುಣಿಗಲ್ ತಾಲ್ಲೂಕಿನ ಸಮಸ್ತ ನಾಗರೀಕರು ಆತಂಕಗೊಂಡಿದ್ದೇವೆ. ಜಗತ್ತಿನ ಕುದುರೆ ತಳಿ ಸಂವರ್ಧನೆ ಕೇಂದ್ರಗಳಲ್ಲಿ ಒಂದಾಗಿರುವ ಕುಣಿಗಲ್ ಕುದುರೆ ಪಾರಂ ಏಷ್ಯಾ ಖಂಡದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. ಭಾರತದಲ್ಲಿ ಪ್ರಥಮ ಸ್ಥಾನ ಹೊಂದಿದೆ. ಕರ್ನಾಟಕದಲ್ಲಿ ಸ್ಥಾಪನೆಗೊಂಡಿದ್ದ 22 ಕುದುರೆ ಪಾರಂಗಳ ಪೈಕಿ ಈಗ ಅಸ್ತಿತ್ವದಲ್ಲಿರುವುದು ನಮ್ಮ ಕುಣಿಗಲ್ ಕುದುರೆ ಪಾರಂ ಮಾತ್ರ, ಈ ನೆಲದಲ್ಲಿ ಬೆಳೆಯುವ ಹುಲ್ಲಿನಲ್ಲಿ ಹೆಚ್ಚಿನ ಮಿನರಲ್ಸ್ ಒಳಗೊಂಡಂತೆ ಉತ್ತಮ ಪೋಷಕಾಂಶಗಳು ಸಿಗುತ್ತವೆ. ಈ ಹುಲ್ಲನ್ನು ತಿಂದ ಕುದುರೆಗಳು ದಷ್ಟ- ಪುಷ್ಟವಾಗಿ ಬೆಳೆಯುವುದರಿಂದ ಇಲ್ಲಿನ ಕುದುರೆಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ ಎಂದು ಹೇಳಿದ್ದಾರೆ.
ಪ್ರಸ್ತುತ ಈ ಪಾರಂ ನಲ್ಲಿ 180 ಕುದುರೆಗಳಿದ್ದು, ಒಂದು ಕುದುರೆಗೆ ಕನಿಷ್ಠ 5 ಎಕರೆ ಭೂಮಿ ಅವಶ್ಯಕತೆ ಇದೆ. ಈಗ ಇರುವ ಕುದುರೆ ಮತ್ತು ಜಾಗಕ್ಕೆ ಹೋಲಿಕೆ ಮಾಡಿದರೆ ಅರ್ಧದಷ್ಟು ಜಾಗದ ಕೊರತೆ ಇದೆ. ಕುದುರೆ ತಳಿಯ ಸಂವರ್ಧನೆಗೆ ಸ್ಥಳದ ಕೊರತೆ ಇರುವಾಗ ಈ ಜಾಗವನ್ನು ಬೇರೆ ಉದ್ದೇಶಗಳಿಗೆ ಸರ್ಕಾರ ಮಂಜೂರು ಮಾಡಬಾರದು ಎಂದು ಹೋರಾಟ ಸಮಿತಿ ಮನವಿಪತ್ರದಲ್ಲಿ ಹೇಳಿದೆ.
ಕುಣಿಗಲ್ ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟಡ್ ಪಾರಂ ಸಮಶೀತೋಷ್ಣ ವಲಯವಾಗಿದ್ದು ಇಲ್ಲಿನ ಜನರಿಗೆ ಉತ್ತಮ ಆಕ್ಸಿಜನ್ ಒದಗಿಸುತ್ತಿದೆ. ಪ್ರಸ್ತುತ ಕುಣಿಗಲ್ ಕುದುರೆ ಪಾರಂನಲ್ಲಿ 200 ಜನರು ಕೆಲಸ ಮಾಡುತ್ತಿದ್ದು, ಈ ಕಾಮಿಕ ಕುಟುಂಬಗಳು ತಮ್ಮ ಜಿವನಕ್ಕಾಗಿ ಸದರಿ ಪಾರಂ ಅನ್ನೇ ಅವಲಂಬಿಸಿವೆ. ಇಲ್ಲಿ ಸುಮಾರು 150 ವರ್ಷಗಳಷ್ಟು ಹಳೆಯ ಮರಗಳು ಸೇರಿದಂತೆ 200 ವಿವಿಧ ಪ್ರಬೇಧದ 6000 ಮರಗಳಿವೆ .ಈ ಮರಗಳಲ್ಲಿ ಸಾವಿರಾರು ಗಿಳಿ, ಗುಬ್ಬಚ್ಚಿ, ನವಿಲು, ಗೂಬೆ, ಗೊರವಂಕಗಳು ಆಶ್ರಯ ಪಡೆದಿವೆ ಸುಮಾರು 500 ಕಾಡು ಮೊಲಗಳಿವೆ ಔಷಧೀಯ ಗುಣವುಳ್ಳ ಗಿಡಮೂಲಿಕೆಗಳಿವೆ. ಇಂತಹ ಸುಂದರ ಜೀವ ವೈವಿಧ್ಯತೆಯನ್ನು ಹೊಂದಿರುವ ಸ್ಥಳವನ್ನು ವಾಣಿಜ್ಯ ಉದ್ದೇಶದಿಂದ ಅಭಿವೃದ್ಧಿ ಹೆಸರಿನಲ್ಲಿ ನಾಶಮಾಡುವುದು ಜೀವ ವಿರೋಧಿ ಮತ್ತು ಪರಿಸರ ವಿರೋಧಿ ದೋರಣೆಯಾಗುತ್ತದೆ ಎಂದು ತಿಳಿಸಿದೆ.
ಕುಣಿಗಲ್ ತಾಲ್ಲೂಕಿನ ನಾಗರೀಕರು ಅಭಿವೃದ್ಧಿಯ ವಿರೋಧಿಗಳಲ್ಲ, ನಮ್ಮ ತಾಲ್ಲೂಕಿನ ಜನರಿಗೆ ಉದ್ಯೋಗ, ಒಳ್ಳೆಯ ಆರೋಗ್ಯ, ಶಿಕ್ಷಣ ಸಿಗುಬೇಕೆಂಬುದು ನಮ್ಮೆಲ್ಲರ ಒತ್ತಾಸೆಯಾಗಿದೆ. ಉದ್ಯೋಗ ಸೃಷ್ಟಿಸಲು ಕೈಗಾರಿಕೆ, ಶಿಕ್ಷಣಕ್ಕೆ ಶಾಲಾ ಕಾಲೇಜು ಸ್ಥಾಪಿಸಲು ನಮ್ಮ ವಿರೋಧ ಇಲ್ಲ. ಇದಕ್ಕೆ ಕುಣಿಗಲ್ ತಾಲ್ಲೂಕಿನ ಬೇರೆ ಬೇರೆ ಭಾಗದಲ್ಲಿ ಸರ್ಕಾರಿ ಜಮೀನಿದೆ. ಅಲ್ಲಿ ಸರ್ಕಾರ ಸ್ಥಾಪನೆ ಮಾಡಬಹುದು ಅದನ್ನು ಬಿಟ್ಟು ವಿಶ್ವವಿಖ್ಯಾತ ಕುದುರೆ ಪಾರಂ ನಲ್ಲಿ ಕುದುರೆ ಸಂವರ್ಧನೆ ಬಿಟ್ಟು ಇಂಟಿಗ್ರೇಟೆಡ್ ಟೌನ್ ಶಿಪ್ ನರ‍್ಮಾಣ ಮಾಡಲು ಹೊರಟಿರುವುದು ನಮ್ಮ ಅಸ್ಮಿತೆಯ ಮೇಲೆ ಸರ್ಕಾರ ಮಾಡುತ್ತಿರುವ ದಾಳಿಯೇ ಆಗಿದೆ ಎಂದಿದ್ದಾರೆ.


