ತಾಯಿ ತನ್ನ ಇಬ್ಬರು ಎಳೆಯ ಮಕ್ಕಳೊಂದಿಗೆ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ, ಗುಬ್ಬಿ ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಜಯಲಕ್ಷ್ಮೀ ಎಂದು ಗುರುತಿಸಲಾಗಿದೆ.
ಇತ್ತೀಚೆಗಷ್ಟೇ ಪತಿ ನಿಧನರಾಗಿದ್ದರು. ಇದರಿಂದ ಕಂಗೆಟ್ಟಿದ್ದ ವಿಜಯಲಕ್ಷ್ಮಿ ಇಂದು ತನ್ನ 11 ತಿಂಗಳ ಹಸುಗೂಸು ಮತ್ತು 4 ವರ್ಷದ ಮಗನೊಂದಿಗೆ ನಿಟ್ಟೂರು ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿರುವ ವಿಜಯಲಕ್ಷ್ಮಿ ಮತ್ತು 11 ತಿಂಗಳ ಹಸುಗೂಸಿನ ಮೃತದೇಹಗಳು ದೊರೆತಿದ್ದು, 4 ವರ್ಷದ ಬಾಲಕನ ದೇಹ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಬಿ.ಚಂದ್ರಶೇಖರ್ ಬಾಬು ಭೇಟಿ ನೀಡಿ ಮೃತರ ಸಂಬಂಧಿಕರಿಗೆ ಸಾಂತ್ವನ ಹೇಳಿದ್ದಾರೆ. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.