Saturday, April 20, 2024
Google search engine
Homeಜಿಲ್ಲೆನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹ

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು, ಸಂವಿಧಾನದ ಅನುಚ್ಚೇದ 341ಕ್ಕೆ ತಿದ್ದುಪಡಿ ತಂದು ಷಡ್ಯೂಲ್ 9ಕ್ಕೆ ಸೇರಿಸಬೇಕು ಸೇರಿ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಡಿಎಸ್ಎಸ್ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕಳೆದ ಮೂವತ್ತು ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಸುತಿದ್ದರೂ ಆಡಳಿತ ನಡೆಸಿದ ಸರ್ಕಾರಗಳು ಒಳಮೀಸಲಾತಿ ವಿಚಾರವನ್ನು ಕಡೆಗಣಿಸಿವೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನೇಮಕವಾಗಿದ್ದ ನ್ಯಾ.ಎ.ಜೆ. ಸದಾಶಿವ ಆಯೋಗ 2011ರಲ್ಲಿ ವರದಿ ನೀಡಿದೆ. ಆದರೂ ಸರ್ಕಾರಗಳು ಸದರಿ ವರದಿಯನ್ನು ಸದನದಲ್ಲಿ ಮಂಡಿಸಿ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸುವ ಕೆಲಸ ಮಾಡಿಲ್ಲ ಎಂದು ದೂರಿದರು.

ಚುನಾವಣಾ ಸಂದರ್ಭದಲ್ಲಿ ಈ ವಿಚಾರವನ್ನು ಮುನ್ನೆಲೆಗೆ ತಂದು ಮತ ಪಡೆದು, ನಂತರ ಅದರ ಬಗ್ಗೆ ಮಾತನಾಡಲು ಸರ್ಕಾರಗಳು ಹಿಂಜರಿಯುತ್ತಿವೆ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 101 ಜಾತಿಗಳಲ್ಲಿ ಕೆಲವು ಜಾತಿಗಳು ಇಂದಿಗೂ ಮೀಸಲಾತಿಯ ಮುಖ ನೋಡಿ, ಶಿಕ್ಷಣವೆಂಬುದು ಮರೀಚಿಕೆಯಾಗಿದೆ. ಹಾಗಾಗಿ ಸರ್ಕಾರ ಈ ವರ್ಷದ ಚಳಿಗಾಲದ ಅಧಿವೇಶದಲ್ಲಿ ವರದಿಯನ್ನು ಮಂಡಿಸಿ,ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ 2022ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಶೇ18 ಮೀಸಲಾತಿಯನ್ನು ಶೇ24ಕ್ಕೆ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ ಅದನ್ನು ಸಂವಿಧಾನದ 9ನೇ ಷಡ್ಯೂಲ್‌ಗೆ ಸೇರಿಸುವ ಪ್ರಕ್ರಿಯೆ ಮಾಡಿಲ್ಲ. ಉಷಾಮೆಹ್ರಾ ಸಮಿತಿ ನೀಡಿದ ವರದಿಯಂತೆ ಕೇಂದ್ರ ಸರ್ಕಾರ ಕೂಡಲೇ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ಷಡ್ಯೂಲ್‌ಗೆ ಸೇರಿಸಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವಿಂಗಡಿಸಬೇಕೆಂದ ವಿಚಾರದಲ್ಲಿ ಏಳು ನ್ಯಾಯಾಧೀಶರ ಸಮಿತಿಯ ಮುಂದೆ ಸರ್ಕಾರ ಬಲವಾಗಿ ವಾದ ಮಂಡಿಸಿ, ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಬೇಕು. ರಾಜ್ಯದ ಜನರ ಸ್ಥಿತಿಗತಿ ಅರಿಯುವ ಸಲುವಾಗಿ ನ್ಯಾಯವಾದಿ ಕಾಂತರಾಜ್ ವರದಿಯನ್ನು ಸದನದಲ್ಲಿ ಚರ್ಚಿಸಿ, ಅಂಗೀಕರಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಬೇಕೆಂದು ಪಿ.ಎನ್.ರಾಮಯ್ಯ ಒತ್ತಾಯಿಸಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ನೀಡಿರುವ ಮೀಸಲಾತಿ ಹೆಚ್ಚಳ ವರದಿಯನ್ನು ಸರ್ಕಾರ ಒಪ್ಪಿಕೊಂಡು, ಸಂವಿಧಾನದ ಷಡ್ಯೂಲ್ 9ಕ್ಕೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರವಾಗಿ ಚರ್ಚಿಸಿ ಅನುಮೋಧನೆ ನೀಡದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಹಬ್ಬತ್ತನಹಳ್ಳಿ ಶ್ರೀನಿವಾಸ್,ಪುಟ್ಟಸ್ವಾಮಿ, ಸುನೀಲ್, ಅಟ್ಟಯ್ಯ, ನಾಗೇಶ್.ಎ, ಗಂಗರಾಜು, ಮಧು.ಟಿ.ಎನ್, ಎಸ್.ಆರ್.ರಘು, ಪುಜಾಹನುಮಯ್ಯ, ಶಿವಣ್ಣ, .ಚಂದ್ರಶೇಖರ್, ಗೌರಮ್ಮ, ಪುಟ್ಟಸ್ವಾಮಿ, ದೊಡ್ಡಯ್ಯ, ಜಗದೀಶ್, ಸುಪ್ರೀಮ್ ಮಂಜುನಾಥ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments