Friday, September 20, 2024
Google search engine
Homeಮುಖಪುಟಜಯರಾಮರಾಜೇ ಅರಸ್ ನೀತಿ-ನಿಯಮಗಳ ಸಮನ್ವಯಕಾರರು - ನಾಡೋಜ ಬರಗೂರು ರಾಮಚಂದ್ರಪ್ಪ

ಜಯರಾಮರಾಜೇ ಅರಸ್ ನೀತಿ-ನಿಯಮಗಳ ಸಮನ್ವಯಕಾರರು – ನಾಡೋಜ ಬರಗೂರು ರಾಮಚಂದ್ರಪ್ಪ

ನನ್ನ ಮತ್ತು ಜಯರಾಮರಾಜೇ ಅರಸ್ ಅವರ ಸಂಬಂಧ ಹಳೆಯದು. ಅವರು ನಿಯಮ ನಿಷ್ಠ ವ್ಯಕ್ತಿ. ಅವರು ಪ್ರೋಟೋಕಾಲ್ಗೆ ನಿಷ್ಠರಾದವರು. ಅನೇಕರು ನಿಯಮನಿಷ್ಟಯ ಜೊತೆಗೆ ಕಾಠಿಣ್ಯವನ್ನು ಹೊಂದಿರುತ್ತಾರೆ. ಆದರೆ ಜಯರಾಮರಾಜೇ ಅರಸು ಅವರ ವಿಶೇಷತೆ ಅಂದರೆ ಅವರು ಸೌಜನ್ಯಶೀಲರು ಹೌದು, ನಿಯಮ ನಿಷ್ಠರೂ ಹೌದು. ನೀತಿ ಮತ್ತು ನಿಯಮ ಇವರೆಡು ಬಂದಾಗ ಕೆಲವರು ನಿಯಮಕ್ಕೆ ಮಾತ್ರ ನಿಷ್ಠರಾಗಿರುತ್ತಾರೆ. ನೀತಿಯನ್ನು ಮರೆಯುತ್ತಾರೆ. ಅರಸು ನೀತಿ ಮತ್ತು ನಿಯಮಗಳು ಸಮನ್ವಯಕಾರರು ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಝನ್ ಟೀಮ್ ಮತ್ತು ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವತಿಯಿಂದ ತುಮಕೂರು ವಿವಿಯಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ಐಎಎಸ್ ಅಧಿಕಾರಿ ಜಯರಾಮರಾಜೇ ಅರಸ್ ಅವರು ಅನುವಾದಿಸಿರುವ ಹೆಣ ಹೊರುವವನ ವೃತ್ತಾಂತ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದಲ್ಲಿ ಬೇಕಾಗಿರುವುದು ಅಂದರೆ ನೀವು ನಂಬಿದ ನೀತಿ ಯಾವುದು? ನೀವು ನಂಬಿದ ಸಾಮಾಜಿಕ ನೀತಿ ಏನು? ರಾಜಕೀಯ ನೀತಿ ಏನು? ಅದಕ್ಕನುಗುಣವಾಗಿ ನೀವು ನಿಯಮಗಳನ್ನು ರೂಪಿಸುತ್ತಾ ಹೋದರೆ ಅದು ಜನಗಳಿಗೆ ಅನುಕೂಲ ಮಾಡಿಕೊಡುತ್ತದೆ. ಜನ ಸಾಮಾನ್ಯರ ಹತ್ತಿರಕ್ಕೆ ಹೋಗುತ್ತದೆ. ಅದಕ್ಕೆ ಬೇಕಾಗಿರುವುದು ಒಂದು ಸಂವೇದನೆ. ಅಂತಹದೊಂದು ಸಂವೇದನೆಯನ್ನು ಅರಸು ಅವರಲ್ಲಿ ಕಂಡಿದ್ದೆ. ಸಾಹಿತಿಗೆ ಒಂದು ಸಾಮಾಜಿಕ ಸಂವೇದನೆ ಇರಬೇಕು. ಸಾಮಾಜಿಕ ಸಂವೇದನೆ ಇಲ್ಲದೇ ಹೋದರೆ ಅವನು ನಿಜವಾದ ಅರ್ಥದಲ್ಲಿ ಉತ್ತಮವಾದ ಸಾಹಿತ್ಯವನ್ನು ರಚಿಸುತ್ತಾರೆಂಬ ನಂಬಿಕೆ ನನಗೆ ಇಲ್ಲ ಎಂದರು.

ವೈಯಕ್ತಿಕ ಸಾಮಾಜಿಕತೆ ಎರಡು ಇದ್ದರೆ ಉತ್ತಮ ಕೃತಿ ಹುಟ್ಟಲು ಸಾಧ್ಯ. ವೈಯಕ್ತಿಕ ಎನ್ನವುದು ನನ್ನ ಅಂತರಂಗವನ್ನು ಯಾವುದು ಪ್ರೇರೇಪಿಸುತ್ತದೆ. ನನ್ನ ಅಂತರಂಗದಲ್ಲಿ ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ಬಹಿರಂಗದಲ್ಲಿರುವ ಬದುಕೇ ಅನ್ನ ಅಂತರಂಗಕ್ಕೆ ಬರುತ್ತದೆ. ಅಂತರಂಗದ ಕುಲುಮೆಯಲ್ಲಿ ಅದು ಒಂದು ರೂಪುಗೊಳ್ಳುತ್ತದೆ. ಅಲ್ಲಿ ವೈಯಕ್ತಿಕ ದೃಷ್ಟಿಕೋನಗಳಿರಬಹುದು. ನನ್ನ ಅನುಭವ ಇರಬಹುದು. ಇವುಗಳೆಲ್ಲವೂ ಸಹಾಯಕ ಮಾಡುತ್ತವೆ. ಸಾಮಾಜಿಕತೆ ಇಲ್ಲದೆ ವೈಯಕ್ತಿಕವಾದ ಅಂಶಗಳು ಸರ್ವ ಸ್ವತಂತ್ರವಲ್ಲ. ಸಾಹಿತಿಗೆ ಸಾಮಾಜಿಕ ಸಂವೇದನೆ ಇರಲೇಬೇಕು ಎಂದು ನಂಬಿರುವವನು ನಾನು ಎಂದು ವಿವರಿಸಿದರು.

ಬರೆಯುವಂತಹ ಕವಿ, ಸಾಹಿತಿಗೆ ಸ್ವಾತಂತ್ರ್ಯ ಇರುತ್ತದೆ. ಭಾಷಾಂತರ ಕೇವಲ ನಿಘಂಟಿನ ಅರ್ಥದಲ್ಲಿ ಮಾಡುವಂತಹದ್ದಲ್ಲ. ನಿಘಂಟುವನ್ನು ಇಟ್ಟುಕೊಂಡು ಕೆಲವು ಪದಗಳಿಗೆ ಅರ್ಥವನ್ನು ಹುಡುಕಬಹುದು. ನಿಘಂಟಿನ ಅರ್ಥದ ಆಧಾರದ ಮೇಲೆ ಸಂಪೂರ್ಣ ಭಾಷಾಂತರ ಮಾಡುವುದು ಅಂದರೆ ಅದೊಂದು ಶುಷ್ಕ ಭಾಷಾಂತರವಾಗುತ್ತದೆ. ಭಾಷಾಂತರಕ್ಕೆ ಅಲ್ಲಿ ಹೊಸ ಪ್ರವೇಶ ಅಗತ್ಯವಿರುತ್ತದೆ. ಭಾಷಾಂತರ ಮೂಲಕೃತಿಯ ಭಾವವನ್ನು ಇಟ್ಟುಕೊಳ್ಳಬೇಕಾಗಿದೆ ಎಂದು ವಿಶ್ಲೇಷಿಸಿದರು.

ಅನುವಾದ ಎನ್ನುವುದು ಒಂದು ಸಾಮಾಜಿಕ ಸಾಂಸ್ಕೃತಿಕ ಪ್ರವೇಶಕ್ಕೂ ಕಾರಣವಾಗುತ್ತದೆ. ಪ್ರೇರಣೆ, ಪ್ರತಿಭೆಯನ್ನು ಬಯಸುತ್ತದೆ. ಆ ದೃಷ್ಟಿಯಿಂದ ಇದೊಂದು ಸೃಜನಶೀಲವಾದ ಪ್ರಕ್ರಿಯೆಯೂ ಆಗಿರುತ್ತದೆ. ತನ್ನದಲ್ಲದ ಭಾಷೆಯೊಂದಿಗೆ ಅನುಸಂಧಾನ ಮಾಡಬೇಕು. ಅಲ್ಲಿರುವ ಭಾವದ ಜೊತೆ ಅನುಸಂಧಾನವನ್ನು ನಡೆಸಬೇಕು. ಹೀಗಾಗಿ ಇದೊಂದು ರೀತಿಯಲ್ಲಿ ಅನುಸಂಧಾನದ ಒಂದು ಪ್ರಕ್ರಿಯೆ ಇದು. ಇದು ಭಾವಾನುಸಂಧಾನವೂ ಹೌದು. ಒಂದು ಸಾಂಸ್ಕೃತಿಕ ಸಾಮಾಜಿಕ ಅನುಸಂಧಾನವೂ ಆಗಿರುತ್ತದೆ ಎಂದು ತಿಳಿಸಿದರು.

ನಿಜವಾದ ಭಾವಾಂತರ ಆಗಬೇಕಾದರೆ ಮಾನಸಿಕ ಮಡಿವಂತಿಕೆಯನ್ನು ಮೀರಬೇಕು. ಆಗ ಮಾತ್ರ ದಲಿತ ಸಂವೇದನೆ ಅರ್ಥವಾಗುತ್ತದೆ. ಮುಸ್ಲಿಂ ಸಂವೇದನೆ ಅರ್ಥವಾಗುತ್ತದೆ. ಸ್ತ್ರೀ ಸಂವೇದನೆ ಅರ್ಥವಾಗುತ್ತದೆ. ಮಡಿವಂತಿಕೆಯನ್ನು ಮೀರದೇ ಇದ್ದರೆ ನಾವು ಸಂಕುಚಿತವಾಗಿ ಇರುತ್ತೇವೆ ಎಂದರು.

ಬೆಂಗಳೂರು ವಿವಿಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ದೊಡ್ಡ ದೊಡ್ಡ ವಿದ್ವಾಂಸರು ಪುಸ್ತಕ ರಚನೆಯ ಸಂದರ್ಭದಲ್ಲಿ ದಲಿತ ಬಂಡಾಯ ಎಂದು ಬರೆಯುತ್ತಲೇ ಇರಲಿಲ್ಲ. ನವ್ಯ ನಂತರದ್ದು ನವ್ಯೋತ್ತರ ಎಂದು ಬಳಸುತ್ತಿದ್ದರು. ಆದರೆ ನವ್ಯೋತ್ತರ ಚಳವಳಿ ಕರ್ನಾಟಕ ಸಾಹಿತ್ಯ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ನವ್ಯೋತ್ತರದ ಧಾರೆಗಳು ಇವೆ. ಇಲ್ಲವೆಂದು ಹೇಳುವುದಿಲ್ಲ. ಆದರೆ ದಲಿತ ಬಂಡಾಯ ಎಂಬ ಪದ ಬರೆಯುತ್ತಿರಲಿಲ್ಲ. ನಾನು ಅದನು ಬರೆಸಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಸಚಿವೆ ನಾಹಿದಾ ಜಮ್ ಜಮ್, ಹೆಣ ಹೊರುವವನ ವೃತ್ತಾಂತ ಕೃತಿಯ ಕರ್ತೃ ಜಯರಾಮರಾಜೇ ಅರಸ್, ಡಾ.ಡಿ.ವಿ.ಗುಂಡಪ್ಪ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಪ್ರೊ.ಅಣ್ಣಮ್ಮ ಮಾತನಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ವಸಂತ್ ಕೃತಿಯ ಕುರಿತು ಮಾತನಾಡಿದರು. ಲೇಖಕ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ಪ್ರಾಸ್ತಾವಿಕ ಮಾತನಾಡಿದರು. ಝನ್ ಟೀಂ ಮುಖ್ಯಸ್ಥ ಉಗಮ ಶ್ರೀನಿವಾಸ್ ಸ್ವಾಗತಿಸಿದರು. ಸಂಶೋಧನಾರ್ಥಿ ನವೀನ್ ನಿರೂಪಿಸಿದರು. ಅರವಿಂದ್ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular