ತಮಿಳುನಾಡಿನ ಕೊಯಮತ್ತೂರು ವಲಯದ ಡೆಪ್ಯೂಟಿ ಐಜಿಪಿ ಹಾಗೂ ಐಪಿಎಸ್ ಅಧಿಕಾರಿ ಸಿ.ವಿಜಯಕುಮಾರ್ ತಮ್ಮ ಬಳಿ ಇದ್ದ ರಿವಾಲ್ವಾರ್ ನಿಂದ ತಲೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಮುಂಜಾನೆ 6.30ಕ್ಕೆ ವಾಯುವಿಹಾರ ಮುಗಿಸಿಕೊಂಡು ಮನೆಗೆ ಬಂದ ಸಿ.ವಿಜಯಕುಮಾರ್ ತಮ್ಮ ಗೃಹ ಕಚೇರಿಯಲ್ಲಿ ಇಟ್ಟಿದ್ದ ಸರ್ವೀಸ್ ರಿವಾಲ್ವಾರ್ ತೆಗೆದುಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ.
ವಿಜಯಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅವರ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಮಿಳುನಾಡು ಡಿಜಿಪಿ ಶಂಕರ್ ಜೈವಾಲ್ ತಿಳಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ನಿದ್ರಾಹೀನತೆಯಿಂದ ಬಳಲುತ್ತಿದ್ದ ವಿಜಯಕುಮಾರ್ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಅವರ ಆತ್ಮಹತ್ಯೆಗೆ ಕೆಲಸದ ಒತ್ತಡವೂ ಇರಬಹುದು ಎಂದು ಹೇಳಲಾಗುತ್ತಿದೆ.