ಎಸ್.ಸಿ.ಎಸ್.ಪಿ. ಟಿ.ಎಸ್.ಪಿ. ಕಾಯ್ದೆಯ ‘ಸೆಕ್ಷನ್ 7ಡಿ’ ದಲಿತರಿಗೆ ಮಾರಕವಾಗಿತ್ತು. ಅದನ್ನು ರದ್ದುಗೊಳಿಸಬೇಕು ಎಂಬುದು ದಲಿತರ ಬಹುದಿನದ ಬೇಡಿಕೆಯಾಗಿತ್ತು. ಸೆಕ್ಷನ್ 7ಡಿ ರದ್ದುಗೊಳಿಸುವುದಾಗಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿರುವುದು ಸಂತಸದ ಸಂಗತಿ.
ಏನಿದು 7ಡಿ?
ಪರಿಶಿಷ್ಟರಿಗೆ ಮೀಸಲಿಟ್ಟ ಹಣವನ್ನು ಪರಿಶಿಷ್ಟರ ಕಲ್ಯಾಣ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕು ಎಂದು ‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆ’ ಹೇಳುತ್ತದೆ. ಆದರೆ ಅದೇ ಕಾಯ್ದೆಯಲ್ಲಿನ ಸೆಕ್ಷನ್ 7(ಡಿ) ಇತರೆ ಸಾಮಾನ್ಯ ಯೋಜನೆಗಳಿಗೆ ಪರಿಶಿಷ್ಟರ ಹಣವನ್ನು ಬಳಸಲು ಅವಕಾಶ ಒದಗಿಸಿತ್ತು. ರಸ್ತೆ, ನೀರಾವರಿಯಂತಹ ಜನರಲ್ ಕಾರ್ಯಕ್ರಮಗಳಿಗೂ ಪರಿಶಿಷ್ಟರ ಅನುದಾನ ಹರಿದು ಹೋಗುತ್ತಿತ್ತು. ಹೆಸರಿಗೆ ಮಾತ್ರ ಪರಿಶಿಷ್ಟರಿಗೆ ಹಣ ಮೀಸಲಾಗುತ್ತಿತ್ತು.
2011ರ ಜನಗಣತಿಯ ಅನ್ವಯ ಪರಿಶಿಷ್ಟ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ನಲ್ಲಿ ಅನುದಾನ ಮೀಸಲಾಗಬೇಕು ಎಂಬ ನಿಟ್ಟಿನಲ್ಲಿ ಕಾಯ್ದೆಯನ್ನು 2013ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಂದಿತ್ತು. ಅದರ ಅನ್ವಯ ಪ್ರತಿ ಇಲಾಖೆಯೂ ಶೇ. 24.1ರಷ್ಟು ಅನುದಾನವನ್ನು ಪರಿಶಿಷ್ಟರಿಗೆ ಮೀಸಲಿಡಬೇಕು. ಆದರೆ ಅದೇ ಕಾಯ್ದೆಯ ಸೆಕ್ಷನ್ 7ಡಿ ಪರಿಶಿಷ್ಟರಲ್ಲದವರೂ ಫಲಾನುಭವಿಗಳಾಗುವ ಯೋಜನೆಗಳಿಗೆ ಅನುದಾನ ದುರ್ಬಳಕೆಯಾಗಲು ಅವಕಾಶ ನೀಡಿತ್ತು.
ಈ ಪ್ರಮಾದ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ. ಈ ಸೆಕ್ಷನ್ ರದ್ದುಗೊಳಿಸಿ ದಲಿತರ ಹಣ ದುರ್ಬಳಕೆಯಾಗುವುದನ್ನು ತಡೆಯಬೇಕೆಂದು ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಆಗ್ರಹಿಸುತ್ತಿದ್ದವು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ SCSP , TSP ಅನುದಾನವನ್ನು ಕಡಿತ ಮಾಡುವುದರ ಜೊತೆಗೆ ಸೆಕ್ಷನ್ 7ಡಿಯ ದುರುಪಯೋಗ ಹೆಚ್ಚಾಯಿತು.
ಈಗ ಮತ್ತೆ ಅಧಿಕಾರಕ್ಕೇರಿರುವ ಕಾಂಗ್ರೆಸ್, ತನ್ನ ತಪ್ಪನ್ನು ತಿದ್ದಲು ಮುಂದಾಗಿರುವುದು ಸ್ವಾಗತಾರ್ಹ. ಜೊತೆಗೆ ಸಿದ್ದರಾಮಯ್ಯನವರು ತಾವು ಮಂಡಿಸಿದ ಬಜೆಟ್ ನಲ್ಲಿ SCSP, TSP ಅಡಿ ಅನುದಾನವನ್ನು ಹೆಚ್ಚಿಸಿದ್ದಾರೆ. ಬಿಜೆಪಿ ಸರ್ಕಾರ ಕಳೆದ ಬಜೆಟ್ ನಲ್ಲಿ 30,000 ಕೋಟಿ ರೂ.ಗಳನ್ನು ಮೀಸಲಿಟ್ಟಿತ್ತು. ಪ್ರತಿ ವರ್ಷವೂ ಬಜೆಟ್ ಗಾತ್ರ ಹೆಚ್ಚಾಯಿತೇ ಹೊರತು ಪರಿಶಿಷ್ಟರಿಗೆ ಮೀಸಲಾಗಬೇಕಾದ ಅನುದಾನದ ಗಾತ್ರ ಹೆಚ್ಚಳ ಕಂಡಿರಲಿಲ್ಲ. ಈಗ ಕಾಂಗ್ರೆಸ್ 34,000 ಕೋಟಿಗೆ ಅನುದಾನ ಏರಿಕೆ ಮಾಡಿದೆ. ಮೇಲು ನೋಟಕ್ಕೆ ಅನುದಾನ ಹೆಚ್ಚಳವಾಗಿರುವುದು ಸ್ಪಷ್ಟವಾಗುತ್ತದೆ. ಅದಕ್ಕಾಗಿ ಧನ್ಯವಾದಗಳು.
ಯತಿರಾಜ್ ಬ್ಯಾಲಹಳ್ಳಿ, ಪತ್ರಕರ್ತರು.