Thursday, September 19, 2024
Google search engine
Homeಮುಖಪುಟಗೊಡ್ಡು ವೇದಾಗಮ ಶಾಸ್ತ್ರಗಳ ವಿರುದ್ಧ ಸಿಡಿದೆದ್ದ ಬಸವಣ್ಣ - ವಡ್ಡಗೆರೆ ನಾಗರಾಜಯ್ಯ

ಗೊಡ್ಡು ವೇದಾಗಮ ಶಾಸ್ತ್ರಗಳ ವಿರುದ್ಧ ಸಿಡಿದೆದ್ದ ಬಸವಣ್ಣ – ವಡ್ಡಗೆರೆ ನಾಗರಾಜಯ್ಯ

890 ನೇ ಬಸವ ಜಯಂತಿಯ ಶುಭಾಶಯಗಳು…

‘ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ,

ತರ್ಕದ ಬೆನ್ನ ಬಾರನೆತ್ತುವೆ, ಆಗಮದ ಮೂಗ ಕೊಯಿವೆ, ನೋಡಯ್ಯಾ.

ಮಹಾದಾನಿ ಕೂಡಲಸಂಗಮದೇವಾ,

ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯಾ’

‘ವೇದ ನಡನಡುಗಿತ್ತು, ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದಿತಯ್ಯಾ

ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ!

ಆಗಮ ಹೆರತೊಲಗಿ ಅಗಲಿದ್ದಿತಯ್ಯಾ

ನಮ್ಮ ಕೂಡಲ ಸಂಗಯ್ಯನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ’

‘ಏನಯ್ಯಾ, ವಿಪ್ರರು ನುಡಿದಂತೆ ನಡೆಯರು, ಇದೆಂತಯ್ಯಾ?

ತಮಗೊಂದು ಬಟ್ಟೆ, ಶಾಸ್ತ್ರಕ್ಕೊಂದು ಬಟ್ಟೆ

ಕೂಡಲಸಂಗಮದೇವಯ್ಯಾ, ಹೊಲೆಯರ ಬಸುರಲ್ಲಿ

ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕೆ ಇದೆ ದೃಷ್ಟ’

ಹೀಗೆ ಹೇಳುವ ಮೂಲಕ

ವಿಪ್ರರ ಆಷಾಢಭೂತಿತನವನ್ನು ಮತ್ತು ವಿಪ್ರರ ಧಾರ್ಮಿಕಾಧಿಕಾರವನ್ನು ಪ್ರತಿಪಾದಿಸುವ ಗೊಡ್ಡು ವೇದಾಗಮ ಶಾಸ್ತ್ರಗಳನ್ನು ಕುರಿತು ಅಂದಿನ ಕಾಲದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಟ್ಟೆ ಎಂದರೆ ವಸ್ತ್ರ, ದಾರಿ, ನಡೆ, ಪರಿಸ್ಥಿತಿ ಹೀಗೆ ಹಲವಾರು ಅರ್ಥಗಳಿವೆ. ಬ್ರಾಹ್ಮಣರು ಉಡುವ ಬಟ್ಟೆ(ವೇಷಭೂಷಣ), ಶಾಸ್ತ್ರಗ್ರಂಥಗಳ ನಿಯಮಾನುಸಾರವಾಗಿ ಅವರು ಅನುಸರಿಸಿ ನಡೆಯುವ ಧಾರ್ಮಿಕ ಆಚರಣೆಗಳು- ನಂಬಿಕೆಗಳು- ವಿಧಿನಿಷೇಧಗಳ ದಾರಿ, ರೀತಿರಿವಾಜುಗಳು ಭಾಷೆ, ಅಧ್ಯಾತ್ಮ, ಲೋಕದರ್ಶನ, ಲೌಕಿಕ ಅಲೌಕಿಕ ಜೀವನ ವಿಧಾನ ಮುಂತಾದುವೆಲ್ಲವೂ

ಶಾಸ್ತ್ರಗಳನ್ನು ಅವಲಂಬಿಸಿಯೇ ನಿರ್ಧಾರವಾಗುತ್ತವೆ. ಹೀಗಾಗಿ ಶಾಸ್ತ್ರಗ್ರಂಥಗಳು ವಿಪ್ರರ ಬದುಕಿನ ರೀತಿಯನ್ನು ಮತ್ತು ಇತರರಿಂದ ಸಾಮಾಜಿಕ ಪ್ರತ್ಯೇಕತೆಯನ್ನು ನಿರ್ಧರಿಸುತ್ತವೆ. ಇದನ್ನು ಹತ್ತಿರದಿಂದ ಕಂಡ ಬಸವಣ್ಣ, ಅಬ್ರಾಹ್ಮಣರಾದ ಇತರರಿಗೊಂದು ನಡೆ, ಶಾಸ್ತ್ರಗಳನ್ನು ಅನುಸರಿಸುವ ಬ್ರಾಹ್ಮಣರಿಗೆ ಮತ್ತೊಂದು ನಡೆ ಎಂದು ಹೇಳಿದ್ದಾರೆ. ‘ಇದೇನಯ್ಯಾ ವಿಪ್ರರು ನುಡಿದಂತೆ ನಡೆಯರು… ಇದೆಂತಯ್ಯಾ?’ ಎಂದು ಬಸವಣ್ಣನವರು ಜಂಕಿಸಿ ನುಡಿಯುತ್ತಿದ್ದಾರೆಂದ ಮೇಲೆ, ವಿಪ್ರರು ಈಗಾಗಲೇ ನುಡಿದಿರುವ ಮಾತಿನಂತೆ ನಡೆದುಕೊಳ್ಳುತ್ತಿಲ್ಲವೆಂದು. ಹಾಗೆ ನುಡಿದಂತೆ ವಿಪ್ರರು ನಡೆಯಲಾರರೆಂದು ಹಾಗೂ ನುಡಿಯುವುದೊಂದು ನಡೆಯುವುದಿನ್ನೊಂದು ಎಂದು ಸ್ಪಷ್ಟವಾಗಿ ಅರ್ಥವಾಗುತ್ತಿದೆ.

ಹೀಗೆ ಬಸವಣ್ಣನವರಂತೆ ಇಂದು ಅದೇ ಬ್ರಾಹಣರ ಆಷಾಢಭೂತಿತನವನ್ನು ಹಾಗೂ ಮೂಲಭೂತವಾದಿ ಮನಸ್ಸುಗಳನ್ನು ತರಾಟೆಗೆ ತೆಗೆದುಕೊಳ್ಳುವವರನ್ನು, ಸಂಸ್ಕೃತವನ್ನು ಪ್ರಮಾಣ ಭಾಷೆಯಾಗಿ ಒಪ್ಪದವರನ್ನು, ಗುಡಿಗುಂಡಾರಗಳನ್ನು ನಿರಾಕರಿಸುವವರನ್ನು, ಸಂಪತ್ತಿನ ಅಸಂಚಯ ಹಾಗೂ ದಾಸೋಹ ಪರಿಕಲ್ಪನೆಯಲ್ಲಿ ಶ್ರದ್ಧೆ ತೋರಿಸುವವರನ್ನು ಮಾತ್ರ ನಿಜಾರ್ಥದಲ್ಲಿ ಬಸವಾನುಯಾಯಿ ಲಿಂಗಾಯತರೆಂದು ನಂಬಬಹುದು. ಇಂಥವರು ಹಿಂದೂಗಳಾಗಲು ಸಾಧ್ಯವಿರದ ಮಾತು.

ಜನಿವಾರ ಧಾರಣೆಯು ಪುರುಷರಿಗೆ ಮಾತ್ರ ಸೀಮಿತವಾಗಿದೆ. ಧಾರ್ಮಿಕ ಹಕ್ಕುಗಳ ಸಮಾನತೆಯಿಂದ ಮಹಿಳೆಯರು ವಂಚಿತರಾಗಿರುವಾಗ ಬಸವಣ್ಣ ಲಿಂಗವನ್ನು ಲಿಂಗಾತೀತವಾಗಿಸಿ ಮಹಿಳೆಯರಿಗೂ ಧರಿಸಲು ಕೊಟ್ಟು ಲಿಂಗಾರ್ಚನೆಯ ಅಧಿಕಾರವನ್ನು ಕಲ್ಪಿಸಿಕೊಡುತ್ತಾರೆ. ಹಾರವ ಮೊದಲಾಗಿ ಅಂತ್ಯಜರನ್ನೂ ‘ಇವ ನಮ್ಮವ’ ಎಂದು ಒಳಗೊಂಡು ಎಲ್ಲರೂ ಲಿಂಗವಂತರಾಗಿ ಸಮನಾಗುತ್ತಾರೆ. ಮಾತ್ರವಲ್ಲದೆ ‘ಆವ ಕುಲವೆಂದು ಆರಾದರೂ ಬೆಸಗೊಂಡಡೆ ಮಾದಾರ ಚೆನ್ನಯ್ಯನ ಕುಲವೆನ್ನಿರಯ್ಯಾ’ ಎಂಬ ಘನತೆಯ ನಡೆಯನ್ನು ಕಲಿಸಿಕೊಡುತ್ತಾರೆ. ಇದು ಜಾತಿಯಿಂದ ಸಾಮಾಜಿಕ ಅವಮಾನವನ್ನು ಅನುಭವಿಸಿದವರಿಗೆ ಆತ್ಮವಿಶ್ವಾಸಕ್ಕೂ ಮತ್ತು ಶೋಷಣೆಗೆ ಗುರಿಪಡಿಸಿದವರಲ್ಲಿ ಪ್ರಾಯಃಶ್ಚಿತ್ತ ಹಾಗೂ ಆತ್ಮ ಪಾವಿತ್ರೀಕರಣಕ್ಕೂ ಒಳಗುಮಾಡುತ್ತದೆ.

ಬಸವಣ್ಣ ಕೂಡಾ ‘ಮಾದಾರನ ಮಗ ನಾನಯ್ಯ’ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ’ ‘ಅಯ್ಯಗಳ ಅಯ್ಯ ನಮ್ಮ ಮಾದಾರ ಚೆನ್ನಯ್ಯ’ ‘ನನ್ನ ನಿನ್ನಂತಹವರೆಲ್ಲಾ ಚೆನ್ನಯ್ಯನ ಮಕ್ಕಳು’ ಎಂದು ಸಾರಿ ಸಾರಿ ಹೇಳುತ್ತಾ, ‘ಆನು ಹಾರವನೆಂದರೆ ಕೂಡಲಸಂಗಮದೇವ ನಗುವನಯ್ಯಾ’ ಎಂದು ಘೋಷಿಸಿಕೊಳ್ಳುತ್ತಾನೆ. ಸಾಮಾಜಿಕ ಭೇದನ್ಯಾಯಗಳನ್ನು ಸೃಷ್ಟಿಸಿದ ವೇದ ಆಗಮ ಶಾಸ್ತ್ರ ತರ್ಕಗಳನ್ನು ನಿರಾಕರಿಸುತ್ತಾರೆ. ಆದುದರಿಂದಲೇ ಬ್ರಾಹ್ಮಣರು ಈಗಲೂ ಬಸವಣ್ಣನ ಹೆಸರನ್ನು ಹೇಳಲು ಅಂಜುತ್ತಾರೆ. ಅವರ ಮನೆಗಳಲ್ಲಾಗಲೀ ಮಠಮಂದಿರಗಳಲ್ಲಾಗಲೀ ಬಸವಣ್ಣನ ಚಿತ್ರಪಟಗಳನ್ನು ಇಟ್ಟುಕೊಳ್ಳುವುದಿಲ್ಕ.

ವಚನಗಳನ್ನು ವಿಶ್ಲೇಪಿಸಿ ವ್ಯಾಖ್ಯಾನಿಸುವ ಕೆಲವರು ಹೇಳುವ ಪ್ರಕಾರ ಬಸವಾದಿ ವಚನಕಾರರು ವಚನಗಳು ವೇದಗಳಲ್ಲಿದನ್ನೇ ಪುನರಪಿ ಮಂಡಿಸಿವೆ, ವಚನಕಾರರು ಹೊಸದೇನನ್ನೂ ಹೇಳಿಲ್ಲ ಎನ್ನುತ್ತಾರೆ. ‘ವೇದ ಗಡಗಡನೆ ನಡುನಡುಗಿತ್ತು ಶಿವನು ಮಾದಾರ ಚೆನ್ನಯ್ಯನ ಮನೆಯಲುಂಡ ಕಾರಣ’ ಎಂದು ಬಸವಣ್ಣ ಹೇಳಿರುವಾಗ, ಮಾದಾರನಿಂದ ಗಡಗಡ ನಡುಗುವ ದುರ್ಬಲವಾದ ವೇದಗಳಿಂದ ಬಸವಾದಿ ವಚನಕಾರರು ಏನನ್ನೂ ಸ್ವೀಕರಿಸಿರಲಾರರೆಂಬುದು ಎಂಥವರಿಗೂ ಅರ್ಥವಾಗುತ್ತದೆ. ವೇದಗಳು ದುರ್ಬಲವಾಗಿರುವುದರಿಂದಲೇ,

“ವೇದಕ್ಕೆ ಒರೆಯ ಕಟ್ಟುವೆ” ಎನ್ನುತ್ತಾರೆ ಬಸವಣ್ಣ.

ಸಾಮಾಜಿಕ ಧಾರ್ಮಿಕ ಭೇದಗಳನ್ನು ಸೃಷ್ಟಿಸಿರುವ ಜೀವವಿರೋಧಿ ಶಾಸ್ತ್ರಗ್ರಂಥಗಳ ವಿರುದ್ಧ ಕಿಡಿಕಾರುವ ಬಸವಣ್ಣ, ‘ಶಾಸ್ತ್ರಕ್ಕೆ ನಿಗಳವನಿಕ್ಕುವೆ’ ಎನ್ನುತ್ತಾರೆ. ಇದರಿಂದ ತಿಳಿಯುವುದೇನೆಂದರೆ ವಚನಕಾರರು ವೈದಿಕರ ಶಾಸ್ತ್ರಗಳಿಂದ ಏನನ್ನೂ ತೆಗೆದುಕೊಂಡಿರಲಾರರು.‌ ಅಂತೆಯೇ ಪುರೋಹಿತರ ಒಣ ತರ್ಕಗಳಿಂದಲೂ ಯಾವುದೇ ಪ್ರೇರಣೆ ಪಡೆದಿರಲಾರರು. ಹಾಗಾಗಿಯೇ ‘ತರ್ಕದ ಬೆನ್ನ ಬಾರನೆತ್ತುವೆ’ ಎಂದು ಹೂಂಕರಿಸುತ್ತಾರೆ ಬಸವಣ್ಣ. ಆಗಮಗಳು ನಿಷ್ಪ್ರಯೋಜಕವಾಗಿ ಕಂಡುಬಂದದ್ದರಿಂದ

‘ಆಗಮದ ಮೂಗ ಕೊಯ್ಯುವೆ’ ಎನ್ನುತ್ತಾರೆ. ಬ್ರಾಹ್ಮಣರು ಮತ್ತವರ ವೇದಾಗಮ ಶಾಸ್ತ್ರ ಜೀವನವಿಧಾನ ಇತ್ಯಾದಿಗಳ ವಿರುದ್ಧ ಇಷ್ಟೊಂದು ತೀವ್ರವಾಗಿ ಎರಗಿರುವ ಬಸವಣ್ಣ ಹುಟ್ಟಿನಿಂದ ಬ್ರಾಹ್ಮಣನಾಗಿರಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಮ್ಮಲ್ಲಿ ಸಹಜವಾಗಿ ಮೂಡುತ್ತದೆ. ಏನೇ ಇರಲಿ ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನಯ್ಯ’ ಎಂದು ಬಸವಣ್ಣನವರೇ ಹೇಳಿಕೊಂಡಿರುವ ಮಾತನ್ನು ನಾವು ಸ್ವೀಕರಿಸೋಣ, ಗೌರವಿಸೋಣ.

ಡಾ.ವಡ್ಡಗೆರೆ ನಾಗರಾಜಯ್ಯ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular