ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಪತ್ರ ಬರೆದು ಬಿಜೆಪಿ ಸರ್ಕಾರದ ಲೋಪಗಳ ಬಗ್ಗೆ ವಿವರಣೆ ನೀಡುತ್ತಿದ್ದು, ಈ ಬಾರಿ ರಾಜ್ಯಕ್ಕೆ ಬಂದಾಗ ಪ್ರಧಾನಿ ಅವರು ಈ ವಿಚಾರವಾಗಿ ರಾಜ್ಯದ ಜನರಿಗೆ ಉತ್ತರ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ದೇವನಹಳ್ಳಿಯ ಕ್ಲಾರ್ಕ್ ಎಕ್ಸಾಟಿಕಾದಲ್ಲಿ ಸಿದ್ದರಾಮಯ್ಯ ಅವರ ಜತೆ ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ‘ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾವು 2013ರಲ್ಲಿ ನಾಡಪ್ರಭು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಟ್ಟಿದ್ದೆವು. ನಾಳೆ ಅಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡುತ್ತಿದ್ದಾರೆ ಎಂದರು
ಸರ್ಕಾರದ ವತಿಯಿಂದ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಉದ್ದೇಶಕ್ಕೆ 2 ಸಾವಿರ ಎಕರೆ ಜಮೀನು ನೀಡಲಾಗಿತ್ತು. ಹೀಗಾಗಿ ಈ ಪ್ರತಿಮೆಯನ್ನು ಸರ್ಕಾರದ ಬದಲು ವಿಮಾನ ನಿಲ್ದಾಣದ ಆಡಳಿತ ಸಂಸ್ಥೆಯೇ ನಿರ್ಮಾಣ ಮಾಡಬಹುದಾಗಿತ್ತು. ಇದಕ್ಕಾಗಿ ಸರ್ಕಾರ ಹಣ ಹಾಕುವ ಅಗತ್ಯ ಇರಲಿಲ್ಲ. ಆದರೂ ಸರ್ಕಾರದ ಹಣದಲ್ಲಿ ಪ್ರತಿಮೆ ಮಾಡಲಾಗಿದೆ ಎಂದು ಹೇಳಿದರು.
ಪ್ರಧಾನಿಗಳು ರಾಜ್ಯಕ್ಕೆ ಆಗಮಿಸುತ್ತಿರುವುದಕ್ಕೆ ನಮ್ಮ ಯಾವುದೇ ತಕರಾರಿಲ್ಲ. ಆದರೆ ಅವರ ಕಾರ್ಯಕ್ರಮಕ್ಕೆ ಅಧಿಕಾರ ದುರುಪಯೋಗ ಮಾಡಿಕೊಂಡು ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಸ್ವಸಹಾಯ ಗುಂಪಿನ ಸದಸ್ಯರನ್ನು ಕರೆ ತರಲು ಮುಂದಾಗಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಜನಬೆಂಬಲ ಇಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ನಡೆಯದೇ ವಚನಭ್ರಷ್ಟವಾಗಿರುವುದು ಹಾಗೂ ಸರ್ಕಾರದ ಲೋಪಗಳ ಬಗ್ಗೆ ನಾವು ಪ್ರಧಾನಿ ಅವರಿಗೆ ಪತ್ರ ಬರೆಯುತ್ತಿದ್ದು, ರಾಜ್ಯಕ್ಕೆ ಆಗಮಿಸುತ್ತಿರುವ ಅವರು ಇದಕ್ಕೆ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಚುನಾವಣೆ ಸಮಯದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಭರವಸೆಗಳಲ್ಲಿ ಶೇ.90 ರಷ್ಟು ಈಡೇರಿಸಿಲ್ಲ. ಈ ಬಗ್ಗೆ ನಾವು ನಿತ್ಯ ಒಂದೊಂದು ಪ್ರಶ್ನೆಗಳನ್ನು ಕೇಳುತ್ತಾ ಬಂದಿದ್ದು, ಇದುವರೆಗೂ ಸರ್ಕಾರ ಯಾವುದಕ್ಕೂ ಉತ್ತರ ನೀಡಿಲ್ಲ.
ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಯಾವುದೇ ದಾಖಲಾತಿ ಇಲ್ಲದೆ ನಮ್ಮ ಸರಕಾರವನ್ನು 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಗೂಬೆ ಕೂರಿಸಿದರು. ಅದನ್ನು ಸಾಬೀತುಪಡಿಸಲು ನಮ್ಮ ಮೇಲೆ ಯಾವುದೇ ತನಿಖೆ ಮಾಡಲಿಲ್ಲ.
ಆದರೆ ಇವರ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ದೂರು, ಬೆಳಗಾವಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣ ಹಾಗೂ ಹುಬ್ಬಳ್ಳಿ ಗುತ್ತಿಗೆದಾರ ಬಸವರಾಜ್ ಅವರು ದಯಾಮರಣ ಅರ್ಜಿ ಬರೆದಿದ್ದಾರೆ. ಈ ಬಗ್ಗೆ ಮೋದಿ ಅವರು ಉತ್ತರಿಸಬೇಕು.
ನಿರುದ್ಯೋಗಿ ಯುವಕರು, ರೈತರ ಆದಾಯ ಡಬಲ್ ಮಾಡುವುದಾಗಿ ಹೇಳಿದ್ದರು. ಇದಾವುದೂ ಆಗಿಲ್ಲ. ಬದಲಿಗೆ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕರ್ನಾಟಕ ರಾಜ್ಯ ಭ್ರಷ್ಟಾಚಾರದ ಕಳಂಕ ಹೊತ್ತಿರುವ ಬಗ್ಗೆ ಮಾಧ್ಯಮಗಳೇ ಬರೆದಿವೆ.
ಚುನಾವಣೆ ಸಮಯದಲ್ಲಿ ನಾನು ತಿನ್ನುವುದಿಲ್ಲ ಬೇರೆಯವರಿಗೂ ತಿನ್ನಲು ಬಿಡಲ್ಲ ಎಂದು ಹೇಳಿದ್ದಿರಿ. ಈಗ ನಿಮ್ಮವರು ಏನು ತಿನ್ನುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಕೇಳುತ್ತಿದ್ದೇವೆ ಎಂದು ಹೇಳಿದರು.