ಮಾಲ್ಡೀವ್ಸ್ ರಾಜಧಾನಿಯಲ್ಲಿ ವಿದೇಶಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದ ಗ್ಯಾರೇಜ್ ನಲ್ಲಿ ಬೆಂಕಿ ದುರಂತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ 8 ಮಂದಿ ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸನ್ ಆನ್ ಲೈನ್ ಇಂಟರ್ ನ್ಯಾಷನಲ್ ನ್ಯೂಸ್ ಪೋರ್ಟಲ್ ಪ್ರಕಾರ ಮಾವೆಯೋ ಮಸೀದಿ ಬಳಿ ಇರುವ ಎಂ. ನಿರುಫೆಹಿ ಪ್ರದೇಶದಲ್ಲಿ ಮಧ್ಯಾಹ್ನ 12.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ದ್ವೀಪ ಸಮೂಹದ ರಾಜಧಾನಿಯು ಉನ್ನತ ಮಾರುಕಟ್ಟೆ ರಜಾ ತಾಣವೆಂದು ಪ್ರಸಿದ್ದವಾಗಿದೆ. ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ನೆಲ ಅಂತಸ್ತಿನ ವಾಹನ ರಿಪೇರಿ ಗ್ಯಾರೇಜ್ ನಿಂದ ಉಂಟಾದ ಬೆಂಕಿಯಲ್ಲಿ ಸಿಲುಕಿಕೊಂಡು ಸಾವನ್ನಪ್ಪಿದವರ 10 ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ಅಗ್ನಿಯನ್ನು ನಂದಿಸಲು ನಾಲ್ಕು ಗಂಟೆ ತೆಗೆದುಕೊಳ್ಳಲಾಗಿದೆ.
ಕಟ್ಟಡದಿಂದ 28 ಜನರನ್ನು ರಕ್ಷಿಸಲಾಗಿದ್ದು ಅವರನ್ನು ಸ್ಥಳಾಂತರಿಸಲಾಗಿದೆ ಎಂದು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷನಾ ಪಡೆ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆ ತಿಳಿಸಿದೆ ಎಂದು ವರದಿ ತಿಳಿಸಿದೆ. ಅವರಲ್ಲಿ ಏಳು ಮಂದಿ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿರುವ ಇಬ್ಬರನ್ನು ಇಂದಿರಾಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅದು ಹೇಳಿದೆ.