Wednesday, December 4, 2024
Google search engine
Homeಜಿಲ್ಲೆವೈದ್ಯರ ನಿರ್ಲಕ್ಷ್ಯಕ್ಕೆ ಐದು ವರ್ಷದ ಮಗು ಬಲಿ - ತನಿಖೆಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು

ವೈದ್ಯರ ನಿರ್ಲಕ್ಷ್ಯಕ್ಕೆ ಐದು ವರ್ಷದ ಮಗು ಬಲಿ – ತನಿಖೆಗೆ ಆಗ್ರಹಿಸಿ ಲೋಕಾಯುಕ್ತರಿಗೆ ದೂರು

ಶಿರಾ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ಐದು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ತುಮಕೂರು ಜಿಲ್ಲಾ ಕಾರ್ಯದರ್ಶಿ ಗಿರೀಶ್ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಮಂಜಿಗಾನಹಳ್ಳಿ ನಿವಾಸಿಗಳಾದ ಅನಿತ ಮತ್ತು ಪಿ.ಎಂ.ಮಂಜುನಾಥ್ ದಂಪತಿಯ ಐದು ವರ್ಷದ ಪುತ್ರ ಹರ್ಷವರ್ಧನ ನಾಯಕ ಮಲಗಿದ್ದಾಗ ಕಿಟಾರನೆ ಕಿರುಚಿಕೊಂಡಿದ್ದಾನೆ. ಆಗ ದೀಪ ಹಾಕಿ ನೋಡಲಾಗಿ ಮಗನ ಮೊಣಕಾಲಿಗೆ ತರೆಚಿದಂತಹ ಗಾಯವಾಗಿರುವುದು ಕಂಡುಬಂದಿದೆ.

ಮಗನಿಗೆ ಹುಳು ಕಚ್ಚಿದೆ ಎಂದು ತಿಳಿದು 30-08-2022ರಂದು ರಾತ್ರಿಯೇ ಶಿರಾ ಆಸ್ಪತ್ರೆಗೆ ಕರೆತಂದರು. ಆಗ ಆಸ್ಪತ್ರೆಯಲ್ಲಿ ವೈದ್ಯರು ಇರಲಿಲ್ಲ. ಶುಶ್ರೋಷಕಿ ಮಾತ್ರ ಇದ್ದರು. ಪೋಷಕರ ಮನವಿ ಮೇರೆಗೆ ಆಸ್ಪತ್ರೆಗೆ ಬಂದ ವೈದ್ಯರಿಗೆ ಆ ಹುಡುಗನ ತಂದೆತಾಯಿ ತಮ್ಮ ಮಗನಿಗೆ ಏನೋ ಕಚ್ಚಿದೆ ಎಂದು ಹೇಳಲು ಹೋದರು. ಆಗ ವೈದ್ಯರು ಮಗುವನ್ನೇ ಕೇಳಿ ತಿಳಿದುಕೊಳ್ಳುತ್ತೇನೆ. ನೀವು ಏನು ಹೇಳಬೇಡಿ. ಎಂದು ಬೇಜವಾಬ್ದಾರಿಯಿಂದ ವೈದ್ಯರು ನಡೆದುಕೊಂಡರು ಎಂದು ಪೋಷಕರು ಆರೋಪಿಸಿದ್ದಾರೆ.

ಆದರೆ ವೈದ್ಯರು ಮಗನಿಂದಲೂ ಮಾಹಿತಿ ತಿಳಿದುಕೊಳ್ಳದೆ ಮಗುವಿನ ಕಾಯಿಲೆಗೆ ಎಕ್ಸ್ ರೇ ಮಾಡಿಸಲು ಹೇಳಿ ಹೋದರು. ಅಲ್ಲಿ ಎಕ್ಸ್ ರೇ ಸೌಲಭ್ಯವೂ ಇರಲಿಲ್ಲ. ಹೀಗಾಗಿ ಮಗುವಿನ ದೇಹ ತಣ್ಣಗಾಗುತ್ತ ಹೋದಾಗ ಆಸ್ಪತ್ರೆ ಸಿಬ್ಬಂದಿ 1400 ರೂಪಾಯಿ ಕಟ್ಟಿಸಿಕೊಂಡು ಜಿಲ್ಲಾಸ್ಪತ್ರೆಗೆ ಅಂಬುಲೆನ್ಸ್ ನಲ್ಲಿ ಕಳಿಸಲಾಯಿತು ಎಂದು ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ.

ಜಿಲ್ಲಾಸ್ಪತ್ರೆಗೆ ಕರೆತಂದಾಗ ಮಗುವನ್ನು ಕೇಳುವವರು ಅಲ್ಲಿರಲಿಲ್ಲ. ಮಗುವಿಕೆ ಹುಳು ಕಚ್ಚಿರಬಹುದು. ರಕ್ತ ಪರೀಕ್ಷೆ ಮಾಡಿ ಎಂದು ಪೋಷಕರು ಕೇಳಿಕೊಂಡರು. ಆಗ ವೈದ್ಯರು ಸುಮ್ಮನೆ ಕೂತ್ಕೋ, ನೀನೋ ಡಾಕ್ಟರ್ ನಾನೋ? ಎಂದು ಪೋಷಕರನ್ನು ಗದರಿಸಿದರು. ಮತ್ತೆ ಇಲ್ಲಿ ಆಗುವುದಿಲ್ಲ. ಬೆಂಗಳೂರಿಗೆ ಕರೆದುಕೊಂಡು ಹೋಗಿ ಎಂದು 1400 ರೂಗಳನ್ನು ಕಟ್ಟಿಸಿಕೊಂಡು ಅಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾಗಿ ಬಂತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೆಂಗಳೂರಿಗೆ ಕರೆದು ಹೋದ ಹದಿನೈದು ನಿಮಿಷಗಳಲ್ಲೇ ಮಗು ತೀರಿಹೋಯಿತು. ಶಿರಾ ಸರ್ಕಾರಿ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆ ವೈದ್ಯರ ನಿರ್ಲಕ್ಷ್ಯವೇ ಮಗು ಸಾವನ್ನಪ್ಪಲು ಕಾರಣವಾಗಿದೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಅಹಂಕಾರದ ಮಾತುಗಳು ಮಗುವಿನ ಚಿಕಿತ್ಸೆಗೆ ಸಹಕಾರಿಯಾಗಲಿಲ್ಲ. ಆಸ್ಪತ್ರೆಗಳಲ್ಲಿ ಬಡ ರೋಗಿಗಳನ್ನು ನೋಡುವ ರೀತಿಯೇ ಅಮಾನುಷವಾದುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲಿ ಆಪಾದಿಸಿದ್ದಾರೆ.

ತಾಲ್ಲೂಕು ಆಸ್ಪತ್ರೆಯಲ್ಲಿ ಎಕ್ಸ್ರೇ ಮತ್ತಿತರ ಸೌಲಭ್ಯವಿಲ್ಲವೆಂದು ಹೇಳಿ ರೋಗಿಯನ್ನು ಹೊರಗಡೆ ಕಳುಹಿಸಲಾಗುತ್ತದೆಂದರೆ ಬಡರೋಗಿಗಳ ರೋಗ ಇನ್ನಷ್ಟು ಉಲ್ಬಣಿಸಿದಂತೆಯೇ ಸರಿ. ಹರ್ಷವರ್ಧನ್ ನಾಯಕನ ತಂದೆತಾಯಿಗಳು ವೈದ್ಯರ ವಿರುದ್ಧ ನೀಡಿದ ದೂರನ್ನು ತುಮಕೂರು ಟೌನ್ ಠಾಣೆ ಪೊಲೀಸರು ದಾಖಲು ಮಾಡಿಕೊಳ್ಳಲು ಮೊದಲಿಗೆ ನಿರಾಕರಿಸಿದರೂ ಕೊನೆಗೆ ಹೋರಾಟದ ಪ್ರತಿಫಲವಾಗಿ ಎಫ್‌ಐಆರ್ ದಾಖಲಿಸಲಾಗಿದೆ.

ಆದ್ದರಿಂದ ಶಿರಾ ತಾಲ್ಲೂಕಿನ ಹರ್ಷವರ್ಧನ್ ನಾಯಕ ಎಂಬ ಐದು ವರ್ಷದ ಮಗುವಿನ ಸಾವಿಗೆ ಕಾರಣವಾದ ಶಿರಾ ಸರ್ಕಾರಿ ಆಸ್ಪತ್ರೆ ಮತ್ತು ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿನ ವೈದ್ಯಕೀಯ ನಿರ್ಲಕ್ಷ್ಯದ ಕುರಿತು ತಮ್ಮ ಇಲಾಖೆಯಿಂದ ವಿಚಾರಣೆ ನಡೆಸಿ ನೊಂದ ಪಾಲಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular