Saturday, July 27, 2024
Google search engine
Homeಇತರೆಲೇಖಕಿ ಉಷಾ ಕಟ್ಟೆಮನೆ ಅವರ ಕಣ್ಣಲ್ಲಿ ಕಾಂತಾರ ಸಿನೆಮಾ

ಲೇಖಕಿ ಉಷಾ ಕಟ್ಟೆಮನೆ ಅವರ ಕಣ್ಣಲ್ಲಿ ಕಾಂತಾರ ಸಿನೆಮಾ

ಇಂದು ಕಾಂತಾರ ಸಿನಿಮಾ ನೋಡಿದೆ.

ತುಳುನಾಡಿನವಳಾದ ನನಗೆ ಈ ಸಿನಿಮಾ ವಿಶ್ವಮಟ್ಟದಲ್ಲಿ ಸುದ್ದಿ ಮಾಡುತ್ತಿರುವುದು‌ ಅತೀವ ಸಂತಸ ತಂದಿದೆ. ಯಾಕೆಂದರೆ ನಾನು ಕನ್ನಡಿಗಳೂ ಹೌದು

ಆದರೆ ಇದೊಂದು ಕಮರ್ಷಿಯಲ್ ಸಿನಿಮಾ. ಹಾಗಾಗಿ ಅದಕ್ಕೆ ಅದರದೇ ಆದ ಮಿತಿಗಳಿವೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ‘ ಸಾಮಾನ್ಯ ಚಿತ್ರಕ್ಕೆ ಸುವರ್ಣದ ಚೌಕಟ್ಟು ‘ ಇದು ಮುದ್ದಣ್ಣನ ‘ ರಾಮಾಶ್ವಮೇಧ ‘ ಕಾವ್ಯಕ್ಕೆ ದಿ.‌ಎಸ್ ವಿ ರಂಗಣ್ಣನವರು ಬರೆದ ಒಂದು ಸಾಲಿನ ವಿಮರ್ಶೆ.

ಕಾಂತಾರ ಸಿನಿಮಾಕ್ಕೂ ಪಂಜುರ್ಲಿ ಭೂತವೆಂಬ ಆಕರ್ಷಕ ಚೌಕಟ್ಟಿದೆ. ಸಶಕ್ತ ಕಥೆಯಿಲ್ಲದಿದ್ದರೂ ತುಳುನಾಡಿನ ಅಸ್ಮಿತೆಗಳಾದ ಕಂಬಳ, ಕೋಳಿ ಅಂಕಗಳ ನೆಯ್ಗೆಯಿದೆ. ವರ್ತಮಾನದ ಮೂಲನಿವಾಸಿಗಳ ಮುಗ್ಧತೆ ಮತ್ತು ಸ್ವಾರ್ಥಿ ಯಾಜಮಾನ್ಯ ವ್ಯವಸ್ಥೆಯ ಕ್ರೌರ್ಯವಿದೆ.‌ ತುಳುನಾಡಿನ ಭೂತ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನವಿಲ್ಲ. ಸಿನೇಮಾದಲ್ಲೂ ನಾಯಕಿ ಮತ್ತು ನಾಯಕನ ಪಾತ್ರ ಗೌಣ. ವರಾಹ ರೂಪಂ ಹಾಡಿನ ಬದಲು ಸಿನೇಮಾದುದ್ದಕ್ಕೂ ಅನುರಣಿಸುವ ಗಗ್ಗರದ ಸೌಂಡಿನ ಜೊತೆ ಪಾಡ್ದನದ ಆಲಾಪವೂ ಬಂದಿದ್ದರೆ ಕಾಂತಾರ ಇನ್ನೊಂದು ಸ್ತರಕ್ಕೆ ಏರುತ್ತಿತ್ತು.

ತುಳುವೇತರಿಗೆ ತುಳುನಾಡಿನ ಭೂತಗಳ ಪರಿಚಯವಿಲ್ಲ. ಹಾಗಾಗಿ ಅವರ ಮುಂದೆ ಹೊಸದೊಂದು ಜಗತ್ತು ತೆರೆದುಕೊಂಡಿದೆ. ಅದನ್ನವರು ಭಯ ಆಶ್ಚರ್ಯಗಳಿಂದ ನೋಡಿದ್ದಾರೆ.‌ ಸಿನೇಮಾವನ್ನು ಅಭೂತಪೂರ್ವಕವಾಗಿ ಗೆಲ್ಲಿಸಿದ್ದಾರೆ.

ಸಿನೇಮಾದ ಬಗ್ಗೆ, ಅದರ ಕಥಾಹಂದರದ ಬಗ್ಗೆ ನೂರಾರು ವಿಮರ್ಶೆಗಳು ಬಂದಿವೆ.‌ ಅದರ ಬಗ್ಗೆ ಮತ್ತೆ ಬರೆಯಬೇಕಾಗಿಲ್ಲ. ಆದರೆ ಒಂದು ವಿಚಾರ ಹೇಳಬೇಕಾಗಿತ್ತು ಸಿನೇಮಾದ ಕೊನೆಯಲ್ಲಿ ಭೂತ ನರ್ತನ ಮಾಡುವಾಗ ಮಗುವನ್ನು ಲಾಲಿಸುವ/ತೂಗುವ ಒಂದು ಅಯಕ್ಷನ್ ಮಾಡುತ್ತದೆ . ಅದು ಭೂತ ಮತ್ತು ಭಕ್ತರ ನಡುವಿನ ಸಂಬಂಧವನ್ನು ವ್ಯಕ್ತಪಡಿಸುತ್ತದೆ. ಅದುವೇ ತಾಯಿ ಮಗುವಿನ ಸಂಬಂಧ.‌

ಈ ತಾಯಿ ಮಗುವಿನ ಸಂಬಂಧದಲ್ಲೊಂದು ವೈರುಧ್ಯವಿದೆ.‌ ಅದು ಸ್ಪರ್ಶ ಮತ್ತು ಅಸ್ಪರ್ಶ್ಯ ನಡುವಿನ ಸಂಬಂಧವೂ ಹೌದು. ‘ ಭೂತ ಪೇರ್ ಪರ್ಪುನ’ ( ಭೂತ ಹಾಲು ಕುಡಿಯುವುದು)ಎಂಬ ರಿಚುವಲ್ ನಲ್ಲಿ ಇದು ಗೋಚರವಾಗುತ್ತದೆ. ಭೂತ ಕಟ್ಟುವವನ ಜಾತಿಯೂ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತೀರಾ ಕೆಳಜಾತಿಯವರಾದ ಅಜಿಲರು ಭೂತ ಕಟ್ಟಿದರೆ ಭೂತವು ಕೋಲ ನಡೆಸುವಾತನ ಮನೆಯ ಮೆಟ್ಟುಕಲ್ಲಿನಲ್ಲಿ ಅಂದ್ರೆ ಹೊಸ್ತಿಲಲ್ಲಿ ಕುಳಿತು ಹಾಲು ಕುಡಿಯುತ್ತದೆ. ಅಜಿಲರಿಗಿಂತ ಸ್ವಲ್ಪ ಮೇಲ್ಜಾತಿಯ ಪಂಬದ, ನಲಿಕೆಯವರು ಭೂತ ಕಟ್ಟಿದರೆ ಭೂತವು ಹೊಸಿಲು ದಾಟಿ ಮನೆಯೊಳಗೆ ಬಂದು ಚಾವಡಿಯಲ್ಲಿ ಕೂತು ಹಾಲು ಕುಡಿಯುತ್ತದೆ.‌. ಇದು ಭೂತಕೋಲದಲ್ಲಿ ಬಹಳ ಮಹತ್ವದ ಮತ್ತು ಇರಲೇಬೇಕಾದ ಆಚರಣೆ. ಅದು ಕಾಂತಾರದಲ್ಲಿ ಇರ್ಲಿಲ್ಲ ಎಂಬುದನ್ನು ಗಮನಿಸಿ.

ಆದರೆ ಶಿವ, ಮನೆಯ ಹೊಸ್ತಿಲು ದಾಟಿ ಊಟದ ಮೇಜಿನ ಮೇಲೆ ಜಮಿನ್ದಾರನ ಎದುರಲ್ಲಿ ಸರಿಸಮನಾಗಿ ಕುಳಿತು ಊಟ ಮಾಡುವ ದೃಶ್ಯ ಇದೆ.‌ ಜಾತಿಪದ್ಧತಿಯನ್ನು ಮುಟ್ಟುವುದಕ್ಕಿಂತ ವರ್ಗಸಂಘರ್ಷವನ್ನು ಮುಟ್ಟುವುದು ಹೆಚ್ಚು ಸುಲಭ ಎಂದು ಸಿನೇಮಾ ಹೇಳುತ್ತಿರಬಹುದೇ?

ನನಗೆ ಅತ್ಯಂತ ಖುಷಿ ಕೊಟ್ಟ ವಿಚಾರ ಏನೆಂದರೆ ‘ ಕಾಂತಾರ’ ಎಂಬ ಸಿನಿಮಾದ ಕಾರಣದಿಂದಾಗಿ ಕನ್ನಡ ಸಿನೇಮಾ ರಂಗ, ಕನ್ನಡ ಭಾಷೆಯತ್ತ ಭಾರತದ ಸಿನಿಪ್ರೇಮಿಗಳು ತಿರುಗಿ ನೋಡುವಂತಾಗಿದೆ. ಇನ್ನೊಂದು ತುಳುವರು ಜಾತಿ ಮತ ಬೇಧವಿಲ್ಲದೆ ಈ ಸಿನಿಮಾವನ್ನು ತಮ್ಮದೆಂದು ಒಪ್ಪಿಕೊಂಡಿದ್ದಾರೆ. ನಮ್ಮ ಮನೆಗೆ ಕೆಲಸಕ್ಕೆ ಬರುವ ಸುಂದರಿಯ ಪ್ರಕಾರ ಅದು ಅವರದೇ ಸಿನಿಮಾವಂತೆ. ಮೇರ ಜಾತೀಯ ಮಧ್ಯೆ ವಯಸ್ಸಿನ ಆ ಹೆಣ್ಣು ಮಗಳು ಎರಡನೇ ಬಾರಿ ಸಿನಿಮಾ ನೋಡ್ತಾಳಂತೆ. ಇದು ಕಾಂತಾರದ ಯಶಸ್ಸು.

ಉಷಾ ಕಟ್ಟೆಮನೆ, ಲೇಖಕಿಯರು

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular