ಬಾನಂಗಳದಲ್ಲಿ ನಡೆದ ಕೌತುಕ, ಬೆಳಕು ನೆರಳಿನಾಟದ ಸೂರ್ಯಗ್ರಹಣ ವೀಕ್ಷಣೆಯನ್ನು ತುಮಕೂರು ನಗರದ ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ನೂರಕ್ಕೂ ಹೆಚ್ಚು ಜನರು ಆಗಮಿಸಿ ಸೂರ್ಯ ಗ್ರಹಣವನ್ನು ವೀಕ್ಷಿಸಿ ಸಂತಸಪಟ್ಟರು. ಗ್ರಹಣ ವೀಕ್ಷಿಸಿದರೆ ತೊಂದರೆಯಾಗುತ್ತದೆ ಎಂಬು ತಪ್ಪು ಗ್ರಹಿಕೆಯನ್ನು ದೂರ ಮಾಡಿದರು.
ಪಿನ್ ಹೋಲ್ ಕ್ಯಾಮೆರಾ ಮತ್ತು ಸೌರ ಕನ್ನಡಕದ ಮೂಲಕ ವೀಕ್ಷಿಸಿದ ಜನರು ಗ್ರಹಣವನ್ನು ನೋಡಿ ಅಭಿಪ್ರಾಯಗಳನ್ನು ಹಂಚಿಕೊಂಡರು. ಗ್ರಹಣ ಕಾಲದಲ್ಲಿ ಬಾಳೆ ಹಣ್ಣು ಮತ್ತು ಪುರಿಯನ್ನು ಹಂಚಿ ತಿಂದರು. ಗ್ರಹಣ ಕಾಲದಲ್ಲಿ ಏನನ್ನೂ ತಿನ್ನಬಾರದು ಎಂಬ ಮೌಢ್ಯಕ್ಕೆ ಸೆಡ್ಡು ಹೊಡೆದರು.

ಸರ್ ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕೇಂದ್ರ ಮಹಡಿ ಮೇಲೆ ಪಿನ್ ಹೋಲ್ ಕ್ಯಾಮೆರಾದ ಮೂಲಕ ಖಗ್ರಾಸ ಗ್ರಹಣವನ್ನು ವೀಕ್ಷಿಸಿದ ಜನರು ಅಲ್ಲಿ ಸೇರಿದ್ದವರೊಂದಿಗೆ ಮಾಹಿತಿ ಹಂಚಿಕೊಂಡರು.
ವಿಜ್ಞಾನ ಕೇಂದ್ರದ ಸದಸ್ಯ ಟಿ.ಎಸ್.ನಿತ್ಯಾನಂದ ಮಾತನಾಡಿ ಗ್ರಹಣವನ್ನು ಯಾರು ಬೇಕಾದರೂ ವೀಕ್ಷಿಸಬಹುದು. ಗ್ರಹಣವನ್ನು ನೋಡುವುದರಿಂದ ಏನೂ ತೊಂದರೆಯಾಗುವುದಿಲ್ಲ. ಆದರೆ ಬರಿ ಗಣ್ಣಿನಿಂದ ನೋಡಬಾರದು. ಸೌರ ಕನ್ನಡಕ ಮತ್ತು ಪಿನ್ ಹೋಲ್ ಕ್ಯಾಮೆರಾ ಮೂಲಕ ವೀಕ್ಷಿಸಿದರೆ ಏನೂ ಸಮಸ್ಯೆಯಾಗುವುದಿಲ್ಲ. ತುಮಕೂರಿನಲ್ಲಿ ಗ್ರಹಣದ ಸ್ವಲ್ಪ ಭಾಗ ಕಂಡು ಬಂತು ಎಂದು ಹೇಳಿದರು.
ವಿಜ್ಞಾನ ಕೇಂದ್ರದ ಎಚ್,ಎಸ್, ನಿರಂಜನಾರಾಧ್ಯ ಮಾತನಾಡಿ ಗ್ರಹಣದ ಕುರಿತು ಜನರಲ್ಲಿ ಮೌಢ್ಯ ಮತ್ತು ಭಯವನ್ನು ತುಂಬಲಾಗುತ್ತಿದೆ. ಗ್ರಹಣ ಖಗೋಳದಲ್ಲಿ ನಡೆಯುವ ವಿಸ್ಮಯ. ಸೂರ್ಯನಿಗೂ ಭೂಮಿಗೂ ಚಂದ್ರ ಅಡ್ಡ ಬಂದಾಗ ಈ ರೀತಿಯ ಗ್ರಹಣಗಳು ಸಂಭವಿಸುತ್ತದೆ. ಇಂತಹ ಪ್ರಕ್ರಿಯೆಯನ್ನು ಜನಸಾಮಾನ್ಯರು ನೋಡಬೇಕು. ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.
ಸೂರ್ಯಗ್ರಹಣ ವೀಕ್ಷಣೆಯ ಸಮಯದಲ್ಲಿ ಎಸ್.ಶಿವಶಂಕರ್, ಯತಿರಾಜ, ಪಂಡಿತ್ ಜವಾಹರ್, ಟಿ.ಪ್ರಸಾದ್, ಕೆ.ನಾಗರಾಜ ರಾವ್ ಮೊದಲಾದವರು ಉಪಸ್ಥಿತರಿದ್ದರು.


