ಬ್ರಿಟನ್ ನ ಕನ್ಸರ್ವೇಟಿವ್ ಪಕ್ಷದ ನಾಯಕ ರಿಷಿ ಸುನಕ್ ರಾಜನನ್ನು ಭೇಟಿಯಾದ ಬಳಿಕ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. 42 ವರ್ಷ ವಯಸ್ಸಿನ ಸುನಕ್ ಭಾರತದ ಅಳಿಯನಾಗಿದ್ದು ಬ್ರಿಟನ್ ಪ್ರಧಾನಿಯಾಗಿ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮಾಡಿದ ಭಾಷಣದಲ್ಲಿ ರಿಷಿ ಸುನಕ್, ಬ್ರಿಟನ್ ಒಂದು ಶ್ರೇಷ್ಠ ದೇಶವಾಗಿದ್ದು ಆರ್ಥಿಕ ಸವಾಲನ್ನು ಎದುರಿಸುತ್ತಿದೆ. ಇದನ್ನು ಸರಿಪಡಿಸಲು ಶ್ರಮಿಸಲಾಗುವುದು ಎಂದು ಹೇಳಿದ್ದಾರೆ.
ನಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ. ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನು ಒಟ್ಟಿಗೆ ತರಲು ಮೊದಲ ಆದ್ಯತೆಯನ್ನು ನೀಡುತ್ತೇನೆ. ಏಕೆಂದರೆ ನಾವು ಎದುರಿಸುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ನಮ್ಮ ಮಕ್ಕಳಿಗೆ ಉತ್ತಮ ಮತ್ತು ಸಮೃದ್ಧ ಭವಿಷ್ಯವನ್ನು ನಿರ್ಮಿಸುವ ಏಕೈಕ ಮಾರ್ಗ ಇದಾಗಿದೆ ಎಂದು ಹೇಳಿದ್ದಾರೆ.
ನಾನು ನಿಮಗೆ ಸಮಗ್ರತೆ ಮತ್ತು ನಮ್ರತೆಯಿಂದ ಸೇವೆ ಸಲ್ಲಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ ಮತ್ತು ಬ್ರಿಟಿಷ್ ಜನರಿಗೆ ಏಳ್ಗೆಗಾಗಿ ನಾನು ದಿನವಿಡೀ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ತಮ್ಮನ್ನು ತಾವು ಹೆಮ್ಮೆಯ ಹಿಂದೂ ಎಂದು ಬಣ್ಣಿಸಿಕೊಂಡಿರುವ 42ನೇ ವಯಸ್ಸಿನ ಸುನಕ್ ಬ್ರಿಟನ್ ನ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ.