ಕರ್ನಾಟಕ ಲೇಖಕಿಯರ ಸಂಘದ ರಾಜ್ಯಧ್ಯಕ್ಷರಾಗಿ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಎಚ್.ಎಲ್.ಪುಷ್ಪ ಆಯ್ಕೆಯಾಗಿದ್ದಾರೆ. ಪುಷ್ಪ ಕಲೇಸಂಗೆ ಆಯ್ಕೆಯಾಗಿರುವುದಕ್ಕೆ ಹಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಚುನಾವಣೆಯಲ್ಲಿ 699 ಮತಗಳು ಚಲಾವಣೆಯಾದವು. ಅದರಲ್ಲಿ ಪುಷ್ಪ 342 ಮತಗಳನ್ನು ಪಡೆದಿದ್ದಾರೆ. ವನಮಾಲ 280 ಮತ ಮತ್ತು ಶೈಲಜಾ 33 ಮತಗಳನ್ನು ಪಡೆದಿದ್ದಾರೆ. 44 ಮತಗಳು ತಿರಸ್ಕೃತವಾಗಿವೆ.
ಪುರುಷೋತ್ತಮ ಬಿಳಿಮಲೆ ಅಭಿನಂದನೆ
ಕರ್ನಾಟಕ ಲೇಖಕಿಯರ ಸಂಘದ ಸದಸ್ಯೆಯರು ನಮ್ಮ ನಡುವಣ ಬಹಳ ಒಳ್ಳೆಯ ಲೇಖಕಿ ಎಚ್ ಎಲ್ ಪುಷ್ಪಾ ಅವರನ್ನು ಮುಂದಿನ ಮೂರು ವರ್ಷಗಳವರೆಗೆ ತಮ್ಮ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಸಾಹಿತ್ಯದ ಹೆಸರಲ್ಲಿ ಸಾಹಿತಿಗಳೇ ಅಲ್ಲದವರು ಸಾಹಿತ್ಯಿಕ ಸಂಘ ಸಂಸ್ಥೆಗಳನ್ನು ಆಕ್ರಮಿಸಿಕೊಂಡಿರುವಾಗ ಇಂಥದ್ದೊಂದು ಬೆಳವಣಿಗೆಗೆ ತನ್ನದೇ ಆದ ಮಹತ್ವವಿದೆ. ʼ
ಸಾಹಿತಿಗಳಿಗೆ ಸಂಘ ಸಂಸ್ಥೆ ನಡೆಸಲು ಬರುತ್ತದಾ?ʼ ಎಂಬುದು ಸಾಹಿತಿಗಳನ್ನು ಮೂಲೆಗೆ ತಳ್ಳಲು ಬಳಸಲಾಗುವ ಒಂದು ಜನಪ್ರಿಯ ನುಡಿಗಟ್ಟು. ಅಂತವರಿಗೆ ಕೆ ಎಸ್ ನಿಸಾರ್ ಅಹಮದ್, ಜಿ ಎಸ್ ಶಿವರುದ್ರಪ್ಪ, ಬರಗೂರು ರಾಮಚಂದ್ರಪ್ಪ, ಶಾಂತರಸ, ಗೀತಾ ನಾಗಭೂಷಣ, ಮಾಲತಿ ಪಟ್ಟಣ ಶೆಟ್ಟಿ , ವಿವೇಕ ರೈ, ಮೊದಲಾದವರ ಬಗ್ಗೆ ಗೊತ್ತಿಲ್ಲ ಅಷ್ಟೇ.
ಎಚ್ ಎಲ್ ಪುಷ್ಪಾ ಅವರನ್ನು ಕಳೆದ ಸುಮಾರು ೩೫ ವರ್ಷಗಳಿಂದ ನಾನು ಬಲ್ಲೆ. ʼನವ್ಯೋತ್ತರ ನಾಟಕಗಳಲ್ಲಿ ಮೈ ಮನಸುಗಳ ಸಂಬಂಧʼ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಚ ಸರ್ವಮಂಗಳಾ, ಪ್ರತಿಭಾ ನಂದಕುಮಾರ್, ಹೇಮಾ ಪಟ್ಟಣ ಶೆಟ್ಟಿ, ಎನ್ ವಿ ಭಾಗ್ಯ ಲಕ್ಷ್ಮಿ ಶಶಿಕಲಾ ವೀರಯ್ಯಸ್ವಾಮಿ ಮೊದಲಾದವರು ಬರೆಯುತ್ತಿದ್ದ ಕಾಲದಲ್ಲಿ ಪುಷ್ಪಾ ಅವರು ʼಅಮೃತಮತಿಯ ಸ್ವಗತʼ ಬರೆದು ನಮಗೆಲ್ಲ ಆಪ್ತರಾದರು.
ಅರಮನೆಯನ್ನು ತ್ಯಜಿಸಿದ ಅಮೃತಮತಿಯು ತನ್ನ ಆತ್ಮದ ಕರೆಗೆ ಓಗೊಟ್ಟು ʼ ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್ʼ ಎಂದುಕೊಂಡು ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ರೀತಿ ಓದುಗರನ್ನು ಆಕರ್ಷಿಸಿತು. ಮುಂದೆ ಅವರು ಗಾಜುಗೊಳ, ಮದರಂಗಿ ವೃತ್ತಾಂತ, ಲೋಹದ ಕಣ್ಣು , ಭೂಮಿಯಲ್ಲ ಇವಳು, ಗೆಲ್ಲಲಾರ್ಕುಮೆ ಮೃತ್ಯುರಾಜನಂ, ಪರ್ವಾಪರ್ವ, ಅವಲೋಕನ, ಗಂಧಗಾಳಿ, ವಚನ ಸಾಹಿತ್ಯ ಮತ್ತು ಸ್ತ್ರೀತ್ವದ ಕಲ್ಪನೆ, ಮೊದಲಾದ ಕೃತಿಗಳನ್ನು ಬರೆದರು. ಸಿದ್ದಲಿಂಗಯ್ಯನವೆರ ಕವಿತೆಗಳ ಲಯಗಾರಿಕೆ ಮತ್ತು ಎಚ್ ಎಸ್ ಶಿವಪ್ರಕಾಶ್ ಅವರ ಕವಿತೆಗಳ ಮಹತ್ವಾಕಾಂಕ್ಷೆಗಳನ್ನು ಪುಷ್ಪಾ ತಮ್ಮ ಕವಿತೆಗಳಲ್ಲಿ ಸಂಯೋಜಿಸಿಕೊಂಡು ಮಹಿಳಾಭಿವ್ಯಕ್ತಿಯನ್ನು ಸಾಧಿಸಿಕೊಂಡಿದ್ದಾರೆ.
ಲೇಖಕಿಯೊಬ್ಬರು ಲೇಖಕಿಯರ ಸಂಘದ ಅಧ್ಯಕ್ಷೆಯಾದ ಖುಷಿಯಲ್ಲಿ ಇಷ್ಟು ಬರೆದೆ. ಅವರಿಗೆ ಅಭಿನಂದನೆಗಳು.