ಮತಾಂತರ ನಿಷೇಧ ವಿಧೇಯಕ ಸ್ವಾತಂತ್ರ್ಯ ನೀಡುವ ವಿಧೇಯಕವಲ್ಲ, ಬದಲಿಗೆ ಧಾರ್ಮಿಕ ಸ್ವಾತ್ತಂತ್ರ್ಯದ ಹಕ್ಕುಗಳನ್ನು ಕಸಿಯುವ ವಿಧೇಯಕವಾಗಿದೆ. ಈ ಮಸೂದೆ ಅಸಂವಿಧಾನಿಕವಾಗಿದ್ದು, ಸಂವಿಧಾನದ ಪರಿಚ್ಛೇದ 25ರಿಂದ 28ರವರೆಗೂ ಧರ್ಮದ ಆಚರಣೆ ಮತ್ತು ಪ್ರಚಾರದ ಹಕ್ಕನ್ನು ಕಸಿಯುತ್ತದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಇಲ್ಲಿ ಸರ್ಕಾರ ಬಲವಂತದ ಮತಾಂತರದ ಪ್ರಕರಣ ಹೆಚ್ಚಾಗುತ್ತಿದೆ ಎಂದು ತಿಳಿಸಿದ್ದು, ಸರ್ಕಾರದ ಬಳಿ ಈ ಬಲವಂತದ ಮತಾಂತರದ ಬಗ್ಗೆ ಅಂಕಿಅಂಶಗಳಿವೆಯೇ? ಕಳೆದ 3 ವರ್ಷಗಳಲ್ಲಿ ಎಷ್ಟು ಮತಾಂತರವಾಗಿದೆ ಎಂದು ಹೇಳಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ವಿಧೇಯಕದಲ್ಲಿ ಸೆಕ್ಷನ್ 3ರಲ್ಲಿ ತಪ್ಪು ನಿರೂಪಣೆ, ಬಲವಂತ, ವಂಚನೆ, ಮದುವೆ ವಾಗ್ದಾನದಿಂದ ಮಾಡುವ ಮತಾಂತರ ನಿಷೇಧ ಎಂದು ಹೇಳಲಾಗಿದೆ. ಆದರೆ ಕಾನೂನು ಸಚಿವರು ತಮ್ಮ ಹೇಳಿಕೆಯಲ್ಲಿ ಈ ಕಾಯ್ದೆ ಗುಜರಾತಿನಲ್ಲಿ ಜಾರಿಯಲ್ಲಿದ್ದು, ಅದನ್ನೇ ಇಲ್ಲಿ ಹಾಕಿದ್ದೇವೆ ಎಂದು ಹೇಳಿದ್ದಾರೆ. ಗುಜರಾತಿನಲ್ಲಿ ಇದೇ ಪ್ಯಾರ ಹಾಕಲಾಗಿದ್ದು, 2021ರಲ್ಲಿ ಇದಕ್ಕೆ ತಡೆಯಾಜ್ಞೆ ನೀಡಲಾಗಿದೆ. ಆಮೀಷ ಎಂದು ಹೇಳಲಾಗಿರುವ ಅಂಶಗಳು ಸರಿಯಾಗಿಲ್ಲ. ಇದು ಅಂತರ್ ಜಾತಿ ವಿವಾಹಕ್ಕೆ ಅಡ್ಡಿಯಾಗಲಿದೆ ಎಂದು ತಡೆಯಾಜ್ಞೆ ನೀಡಿದೆ. ಇದು ಸರ್ಕಾರದ ಗಮನಕ್ಕೆ ಬಂದಿಲ್ಲವೇ ಎಂದಿದ್ದಾರೆ.
ಯಾರಾದರೂ ಸ್ವಇಚ್ಛೆಯಿಂದ ಬೇರೆ ಧರ್ಮ ಪಾಲಿಸಬೇಕಾದರೆ, ಜಿಲ್ಲಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ನೊಟೀಸ್ ನೀಡಿ ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸಂವಿಧಾನದಲ್ಲಿ ನೀಡಲಾಗಿರುವ ಹಕ್ಕನ್ನು ಬಳಸಿಕೊಳ್ಳಲು ನಾವು ಸಚಿವಾಲಯ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಯಾಕೆ ಪಡೆಯಬೇಕು? ಎಂದು ಕೇಳಿದ್ದಾರೆ.
2021ರಲ್ಲಿ ತುಮಕೂರು ಸಂಸದರಿಗೆ ಹಳ್ಳಿಗೆ ಪ್ರವೇಶ ನೀಡಿಲ್ಲ. ಇದು ಧರ್ಮವೇ? ಹೀಗಿರುವಾಗ ಈ ಮಸೂದೆ ಯಾಕೆ ತಂದಿದ್ದಾರೆ? ಈ ಸರ್ಕಾರ ಬಸವಣ್ಣನವರ ಕೆಲಸವನ್ನು ತಪ್ಪು ಎಂದು ಹೇಳಲು ಹೊರಟಿದೆಯೇ? ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಇದು ಸರ್ಕಾರ ಪ್ರತಿಯೊಬ್ಬರ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಮಸೂದೆ ಎಂದು ದೂರಿದರು.
ಮತ್ತೊಂದು ಮತಾಂತರ ಆದ ನಂತರ. ಇದರಲ್ಲಿ ಹೆಸರು, ಲಿಂಗ, ವಯಸ್ಸು, ತಂದೆ ತಾಯಿ ಹೆಸರು, ಆದಾಯ ಮಾಹಿತಿ ನೀಡಬೇಕು. ನಂತರ ಅವರು ಸಾರ್ವಜಿನಕ ನೊಟೀಸ್ ಬೋರ್ಡ್ ನಲ್ಲಿ ಹಾಕುತ್ತಾರೆ. ಈ ಮಾಹಿತಿ ಸಾರ್ವಜನಿಕವಾಗಿ ಪ್ರಕಟಿಸುವುದು ಕಾನೂನು ಬಾಹೀರ. ನಮ್ಮ ರಾಜ್ಯದಲ್ಲಿ ಕಾನೂನು ಇಲಾಖೆ ಸತ್ತಿದೆ ಎಂದು ಟೀಕಿಸಿದರು.
ಈ ಮಸೂದೆ ಈ ಎಲ್ಲ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗುವುದಿಲ್ಲ ಎಂದು ಸರ್ಕಾರ ಬಹಿರಂವಾಗಿ ತಿಳಿಸಬೇಕು. ಗುಜರಾತ್, ಮಹರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಹಾದಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟನೆ ನೀಡಲಿ. ನಿಮ್ಮ ಬಳಿ ಬಲವಂತದ ಮತಾಂತರದ ದಾಖಲೆಗಳೇ ಇಲ್ಲ. ಕೇವಲ ಕೇಶವಕೃಪಾದ ಮನವೊಲಿಸಲು ಈ ಮಸೂದೆ ತಂದಿದ್ದಾರೆ. ಈ ಕಾನೂನಿನ ಮಾನ್ಯತೆಯನ್ನು ನಾವು ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.