ದೇಶದಲ್ಲಿ ಹೆಚ್ಚುತ್ತಿರುವ ಕೋಮುವಾದದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಹಮ್ಮಿಕೊಂಡಿದ್ದ ಸಿಪಿಎಂ ರಾಜಕೀಯ ಸಮಾವೇಶವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪರ್ಯಾಯ ರಾಜಕೀಯ ಶಕ್ತಿಯಾಗಿ ಸಿಪಿಎಂ ನೇತೃತ್ವದ ರಾಜಕೀಯ ಶಕ್ತಿ ಮಾತ್ರ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಕೋಮುವಾದದಿಂದ ದೇಶದಲ್ಲಿ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ. ಬದಲಾಗಿ ಪ್ರಜಾಪ್ರಭುತ್ವ ಮತ್ತು ಸಮಾಜವಾದಿ ಚಿಂತನೆಗಳಲ್ಲಿ ತೊಡಗಿರುವವರು ಮೇಲೆ ದಾಳಿ ಮಾಡಿ ಅದನ್ನು ಸಂಭ್ರಮಿಸಲಾಗುತ್ತಿದೆ ಎಂದು ದೂರಿದರು.

ಆದರೆ ಪ್ರಸ್ತುತ ದೇಶದಲ್ಲಿ ಉಂಟಾಗಿರುವ ಬೆಲೆ ಏರಿಕೆ, ನಿರುದ್ಯೋಗ, ಸಾಕ್ಷರತಾ ಪ್ರಮಾಣ ಇವುಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಕೇರಳದಲ್ಲಿ ಮಾನವ ಅಭಿವೃದ್ಧಿಯ ಸೂಚ್ಯಂಕವು ಉತ್ತಮವಾಗಿದೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲಿಯೇ ಅತಿಹೆಚ್ಚು ಸಾಧನೆಯನ್ನು ಮಾಡಿದ ಮೊದಲ ರಾಜ್ಯವಾಗಿದೆ ಎಂದರು.
ದೇಶದಲ್ಲಿ ಹಣದುಬ್ಬರವು ಅತ್ಯಂತ ಕೆಳಮಟ್ಟದಲ್ಲಿರುವ ಸಂದರ್ಭದಲ್ಲಿ ಕೇರಳದಲ್ಲಿ ಹಣದುಬ್ಬರನ್ನು ಸರಿಸಮಾನವಾಗಿ ನಿಯಂತ್ರಣದಲ್ಲಿ ಇಡಲಾಗಿದೆ. ಕರ್ನಾಟಕದಲ್ಲಿಯೂ ಸಿಪಿಎಂ ನೇತೃತ್ವದ ರಾಜಕೀಯವನ್ನು ರಾಜ್ಯದ ಜನತೆ ಬಯಸಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಪಕ್ಷದ ನೇತೃತ್ವದಲ್ಲಿ ರಾಜಕೀಯ ಪ್ರಯತ್ನ ಮಾಡಲಿದೆ ಎಂದು ಹೇಳಿದರು.

ಸಮಾಜವಾದಿ ಸರ್ಕಾರಗಳಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಕಾರ್ಪೋರೇಟ್ ಸರ್ಕಾರಗಳು, ವ್ಯಾಪಾರಿ ಮನೋಭಾವವನ್ನು ಹೊಂದಿದ್ದು ಅವರು ವ್ಯಾಪಾರವನ್ನು ಹೆಚ್ಚು ಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಗಮನಹರಿಸುತ್ತಾರೆ ಹೊರತು ಜನಸಾಮಾನ್ಯರ ಸಮಸ್ಯೆಗಳಿಗೆ ಯಾವುದೇ ರೀತಿಯಲ್ಲಿ ಗಮನಹರಿಸುವುದಿಲ್ಲ ಎಂದು ತಿಳಿಸಿದರು.
ಪ್ರಸ್ತುತ ಬಿಜೆಪಿ ಸರ್ಕಾರವು ಸರ್ಕಾರವು ಸಹ ಅದೇ ನಿಟ್ಟಿನಲ್ಲಿ ಇರುವುದರಿಂದ ಮತ್ತು ಕಾರ್ಪೋರೇಟ್ ಪರವಾದ ನಿಲುವುಗಳು ಇರುವುದರಿಂದ ಜನಸಾಮಾನ್ಯರ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ತೆರಿಗೆಗಳು ಹೆಚ್ಚಳವಾಗಿ ಜೀವನ ನಡೆಸುವುದು ಅತ್ಯಂತ ಕಠಿಣವಾಗಿದೆ. ಸಿಪಿಎಂ ನೇತೃತ್ವದ ಸಮಾಜವಾದಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ದೇಶದಲ್ಲಿ ಜನರಿಗಾಗಿ ಅಭಿವೃದ್ಧಿಗಾಗಿ, ಆರೋಗ್ಯಕ್ಕಾಗಿ ಶಿಕ್ಷಣಕ್ಕಾಗಿ ಅತಿಹೆಚ್ಚು ಕೆಲಸ ಮಾಡಲಿದೆ. ಇಂತಹ ರಾಜಕೀಯ ಪ್ರಯತ್ನವನ್ನು ಸಿಪಿಎಂ ದೇಶದಲ್ಲಿ ಪ್ರಯತ್ನಿಸಲಿದೆ ಎಂದರು.


