Thursday, November 21, 2024
Google search engine
Homeಮುಖಪುಟಪತಿಯ ಮರಣದ ನಂತರ ಪತ್ನಿಗೆ ಜಾತಿ ಕಂಟಕ - ದಲಿತಳೆಂಬ ಕಾರಣಕ್ಕೆ ಬಹಿಷ್ಕಾರ ಆರೋಪ

ಪತಿಯ ಮರಣದ ನಂತರ ಪತ್ನಿಗೆ ಜಾತಿ ಕಂಟಕ – ದಲಿತಳೆಂಬ ಕಾರಣಕ್ಕೆ ಬಹಿಷ್ಕಾರ ಆರೋಪ

ಪತಿಯ ಮರಣದ ನಂತರ ಆತನ ಪತ್ನಿ ದಲಿತಳೆಂಬ ಕಾರಣಕ್ಕೆ ಪತಿಯ ಕುಟುಂಬದವರು ಮನೆಗೆ ಬಿಟ್ಟುಕೊಳ್ಳದೇ ಬಹಿಷ್ಕಾರ ಹಾಕಿರುವ ಘಟನೆ ನಗರದ ವಿದ್ಯಾನಗರದಲ್ಲಿ ನಡೆದಿದೆ. ಇದನ್ನು ವಿರೋಧಿಸಿರುವ ಪತ್ನಿ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಪತಿಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ.

ತುಮಕೂರಿನ ವಿದ್ಯಾನಗರದಲ್ಲಿರುವ ಶ್ರೀಶೈಲ ಆಗ್ರೋ ರೈಸ್ ಮಿಲ್ ಮಾಲಿಕ ದಿ.ಕೃಷ್ಣಪ್ಪ ಅವರ ಸೊಸೆ ಮಂಜುಳಾ ತನ್ನ ಎರಡೂವರೆ ವರ್ಷದ ಮಗಳೊಂದಿಗೆ ಮನೆಗೆ ಸೇರಿಸಿಕೊಳ್ಳುವಂತೆ ಒತ್ತಾಯಿಸಿ ಪತಿಯ ಮನೆಯ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಆಕೆಯ ಪೋಷಕರು ಮತ್ತು ದಲಿತ ಸಂಘಟನೆಗಳು ಮಂಜುಳಾ ಅವರಿಗೆ ಬೆಂಬಲ ನೀಡಿದ್ದಾರೆ.

ಒಕ್ಕಲಿಗ ಸಮುದಾಯದ ಜಿತೇಂದ್ರ ಮತ್ತು ಭೋವಿ ಸಮುದಾಯದ ಮಂಜುಳಾ ಪರಸ್ಪರ ಪ್ರೀತಿಸಿ 2019ರಲ್ಲಿ ವಿವಾಹವಾಗಿದ್ದರು. ಇದಕ್ಕೆ ಎರಡೂ ಕಡೆಯ ಮನೆಯವರ ಒಪ್ಪಿಗೆ ಇತ್ತು. ಆದರೆ ಪತಿ ಜಿತೇಂದ್ರನ ಅಕ್ಕಂದಿರು ಮಂಜುಳಾ ದಲಿತಳು ಎಂಬ ಕಾರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಆರೋಪಿಸಲಾಗಿದೆ.

ಜಿತೇಂದ್ರನ ತಾಯಿ ಬೆಂಗಳೂರಿನಲ್ಲೇ ವಾಸವಿದ್ದು ಆಗಾಗ ತುಮಕೂರಿನ ಮನೆಗೆ ಬಂದು ಹೋಗುತ್ತಿದ್ದರು. ಪತಿ ಜಿತೇಂದ್ರ ರೈಸ್ ಮಿಲ್ ನೋಡಿಕೊಳ್ಳುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯದಿಂದ ಪತಿ ಜಿತೇಂದ್ರ ಮರಣಹೊಂದಿದ್ದರು. ಹೀಗಾಗಿ ಎರಡು ತಿಂಗಳಿಂದ ಬಾಡಿಗೆ ಕಟ್ಟದೆ ಇದ್ದರಿಂದ ಮಾಲಿಕರು ಮನೆ ಖಾಲಿ ಮಾಡಿಸಿದರು ಎಂದು ಹೇಳಲಾಗಿದೆ.

ಇದರಿಂದ ನನ್ನ ಮಗಳನ್ನು ಕರೆದುಕೊಂಡು ನನ್ನ ಪತಿಯ ಮನೆಗೆ ಬಂದಿದ್ದೇನೆ. ಆದರೆ ಜಿತೇಂದ್ರನ ಐದು ಮಂದಿ ಅಕ್ಕಂದಿರು ಮನೆಯಲ್ಲಿ ಸೇರಿಕೊಂಡಿದ್ದು, ನಮ್ಮನ್ನು ಒಳಗೆ ಸೇರಿಸದೆ ಬಾಗಿಲು ಹಾಕಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದರೆ ನೀನು ದಲಿತಳು, ನಿನ್ನನ್ನು ನಮ್ಮ ಮನೆಗೆ ಸೇರಿಸುವುದಿಲ್ಲ ಎನ್ನುತ್ತಾರೆ ಎಂದು ಧರಣಿ ನಡೆಸುತ್ತಿರುವ ಮಂಜುಳಾ ಆರೋಪಿಸಿದ್ದಾರೆ ಎಂದು ವಿಜಯವಾರ್ತೆ.ಕಾಮ್ ವರದಿ ಮಾಡಿದೆ.

ಜಿತೇಂದ್ರನ ಅಕ್ಕಂದಿರು ಸೊಸೆ ಮಂಜುಳಾ ವಿರುದ್ಧ ಜಿತೇಂದ್ರನನ್ನು ನೀನೆ ಕೊಲೆ ಮಾಡಿದ್ದೀಯಾ ಎಂದು ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ಮನೆ ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular