ಸರ್ಕಾರಿ ಉದ್ಯೋಗಗಳಿಗೆ ಲಂಚ ಕೊಡುವ ಶಕ್ತಿಯಿಲ್ಲದ ಬಡ ಉದ್ಯೋಗಕಾಂಕ್ಷಿಗಳು ತಮ್ಮ ಪೋಷಕರು ಬೆಳೆದ ಅಕ್ಕಿ, ರಾಗಿ, ಜೋಳ ಮುಂತಾದ ಬೆಳೆಗಳ ಗಂಟನ್ನು ನನ್ನ ಕೈಗಿತ್ತು ಸರ್ಕಾರಕ್ಕೆ ತಲುಪಿಸಿ, ಉದ್ಯೋಗ ಕೊಡಿಸಿ ಎಂದು ಕೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ನಿರೀಕ್ಷೆಯಿಟ್ಟುಕೊಂಡು, ವರ್ಷಗಟ್ಟಲೆ ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿಯೂ ಆಳುವ ಸರ್ಕಾರದ ಅಕ್ರಮದ ಕಾರಣಕ್ಕೆ ಉದ್ಯೋಗ ವಂಚಿತರಾದಾಗ ಆಗುವ ನೋವು, ಹತಾಶೆ, ಸಂಕಟವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರ ಇನ್ನಾದರೂ ಪಾರದರ್ಶಕ ನೇಮಕಾತಿ ನಡೆಸಿ, ಪ್ರಾಮಾಣಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು, ಇಲ್ಲದಿದ್ದರೆ ಯುವ ಜನರ ಆಕ್ರೋಶದ ಅಲೆಗೆ ಬಿಜೆಪಿಯ ಭ್ರಷ್ಟ ಸರ್ಕಾರ ಕೊಚ್ಚಿ ಹೋಗುವ ದಿನ ದೂರವಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರವು ಸರ್ಕಾರಿ ನೇಮಕಾತಿಗಳಲ್ಲಿ ನಡೆಸುತ್ತಿರುವ ಅಕ್ರಮಗಳಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಸಿಗದೆ, ಬದುಕು ಅತಂತ್ರವಾಗಿದೆ ಎಂದಿದ್ದಾರೆ.
ಇಂತಹ ಲಕ್ಷಾಂತರ ನೊಂದ ಯುವ ಜನರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ನನ್ನ ಹೋರಾಟ ಮುಂದುವರೆಸುತ್ತೇನೆ. ಪಾರದರ್ಶಕ ನೇಮಕಾತಿ ನಡೆಯಲಿ, ಅರ್ಹರು ಆಯ್ಕೆಯಾಗಲಿ ಎಂದು ತಿಳಿಸಿದ್ದಾರೆ.