ಜಿಎಸ್.ಟಿ. ಆರಂಭವಾದಾಗಲೇ ಆಹಾರ ಪದಾರ್ಥಗಳು ಪ್ಯಾಕೇಜ್ ಆಗಿದ್ದರೂ ಅವುಗಳನ್ನು ಜಿಎಸ್.ಟಿ.ಯಿಂದ ಹೊರಗಿಡಬೇಕು ಎಂದು ನಾವು ಪ್ರತಿಪಾದನೆ ಮಾಡಿದ್ದೇವೆ. ಅದರಂತೆಯೇ ತೀರ್ಮಾನವಾಗಿತ್ತು ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಹಾಳಿದ್ದಾರೆ.
ಆಹಾರ ಪದಾರ್ಥಗಳನ್ನು ತೆರಿಗೆ ವ್ಯಾಪ್ತಿಗೆ ತೆಗೆದುಕೊಂಡು ಬಂದರೂ ಕೂಡ ಸರ್ಕಾರಕ್ಕೆ ಇದರಿಂದ ದೊಡ್ಡ ಆದಾಯ ಬರುವುದಿಲ್ಲ. ಈ ತೆರಿಗೆ ಸರಿಯಾಗಿ ಪಾವತಿ ಮಾಡಲಾಗುತ್ತಿದೆಯೇ ಇಲ್ಲವೇ ಎಂದು ತೆರಿಗೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಲು ಸಾಧ್ಯವಾಗುವುದಿಲ್ಲ. ಇದರಿಂದ ಲಾಭ ನಷ್ಟ ಹಾಕಿದ ನಂತರವಷ್ಟೇ ಇವುಗಳನ್ನು ತೆರಿಗೆ ವ್ಯಾಪ್ತಿಯಿಂದ ಬಿಡುವುದು ಉತ್ತಮ ಎಂದು ತೀರ್ಮಾನವಾಗಿತ್ತು ಎಂದಿದ್ದಾರೆ.
ಸರ್ಕಾರ ದೊಡ್ಡ ಹಂತದಲ್ಲಿ ಸಂಪನ್ಮೂಲ ಸೋರಿಕೆಯಾಗುತ್ತಿರುವ ಕಡೆ ಗಮನಹರಿಸಬೇಕು. ದೊಡ್ಡವರು ತೆರಿಗೆ ಕಟ್ಟುತ್ತಿಲ್ಲ. ಅವರ ಬದಲಾಗಿ ಬಡಪಾಯಿಗಳ ಮೇಲೆ ಹೊರೆ ಹಾಕಿ ನಷ್ಟ ಭರಿಸಲು ಮುಂದಾಗಿರುವುದು, ಬಡವರ ರಕ್ಷಣೆ ಮಾಡಬೇಕು ಎಂಬ ಸ್ವತಂತ್ರ ಭಾರತ ಸಿದ್ದಾಂತವನ್ನೇ ಬುಡಮೇಲು ಮಾಡುವ ಪ್ರಯತ್ನವಾಗಿದೆ ಎಂದು ದೂರಿದರು.
ಬಡವರ ಮೇಲೆ ಹೆಚ್ಚಿನ ತೆರಿಗೆ ಹಾಕಿ ಶ್ರೀಮಂತರು ಕಟ್ಟುವ ಕಾರ್ಪೋರೇಟ್ ತೆರಿಗೆಯನ್ನು ಶೇ.30 ರಿಂದ ಶೇ.22ಕ್ಕೆ, ಶೇ.25 ರಿಂದ ಶೇ.15ಕ್ಕೆ ಇಳಿಸಿದ್ದಾರೆ. ನೂರಾರು ಕೋಟಿ ವ್ಯವಹಾ ಮಾಡುವವರ ಮೇಲೆ ತೆರಿಗೆ ಇಳಿಸಿ ಅಲ್ಲಿನ ನಷ್ಟವನ್ನು ಬಡವರು ಬಳಸುವ ಪದಾರ್ಥಗಳ ಮೇಲೆ ಹಾಕುತ್ತಿರುವುದು ದೇಶದ ಸಂವಿಧಾನ, ಸಮಾಜವಾದದ ಆಶಯಕ್ಕೆ ತದ್ವಿರುದ್ಧವಾಗಿದೆ ಎಂದು ಟೀಕಿಸಿದರು.
ಕಂಪನಿಗಳು ಪದಾರ್ಥ ಖರೀದಿ ಮಾಡುವಾಗ ಕಟ್ಟುವ ತೆರಿಗೆಯನ್ನು ಇನ್ ಪುಟ್ ಟ್ಯಾಕ್ಸ್ ಎಂದು ಮತ್ತೆ ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಹೀಗಾಗಿ ಕಂಪನಿಗಳು ತೆರಿಗೆ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆ ಹಾಕುವ ಅಗತ್ಯವಿಲ್ಲ ಎಂದು ಹೇಳಿದರು.
ಜಿಎಸ್.ಟಿ. ಜಾರಿ ಬಂದಾಗಿನಿಂದ ಯಾವ ಕಂಪನಿಗಳು ತಮಗೆ ಸಿಗುತ್ತಿರುವ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿಲ್ಲ. ಇಂತಹ ಕಂಪನಿಗಳ ಮೇಲೆ ಸರ್ಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಕಂಪನಿಗಳು ಸರ್ಕಾರಕ್ಕೆ ಕಟ್ಟುವ ತೆರಿಗೆ ಹಾಗೂ ಕಂಪನಿಗೆ ಮರುಪಾವತಿಯಾಗುವ ತೆರಿಗೆ ಎರಡನ್ನೂ ಗ್ರಾಹಕರಿಂದಲೇ ವಸೂಲಿ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಒಂದು ಕಡೆ ಕಂಪನಿಗಳು ಲಾಭ ಹಾಗೂ ಅಧಿಕ ಲಾಭ ಎರಡನ್ನೂ ಜನಗಳಿಂದಲೇ ವಸೂಲಿ ಮಾಡಲಾಗುತ್ತಿದೆ. ಮತ್ತೊಂದು ಕಡೆ ಜನರು ಕಂಪನಿಯ ಲಾಭ, ಮರುಪಾವತಿಯ ತೆರಿಗೆ ಲಾಭ ಹಾಗೂ ಸರ್ಕಾರಕ್ಕೆ ತೆರಿಗೆ ಈ ಮೂರರ ಹೊರೆಯನ್ನು ಹೊರಬೇಕಿದೆ. ಈ ವಾಸ್ತವಾಂಶ ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಈ ವಿಚಾರವನ್ನು ಮುಚ್ಚಿಹಾಕಲು ಜನರನ್ನು ತಪ್ಪುದಾರಿಗೆ ಎಳೆಯಲು ಸುಳ್ಳು ಹೇಳುತ್ತಿದ್ದಾರೆ. ಇದು ದುರಾದೃಷ್ಟದ ವಿಚಾರ ಎಂದು ಆರೋಪಿಸಿದರು.