ಜೆಡಿಎಸ್ ಪಕ್ಷದಲ್ಲಿ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಕೆಟ್ಟದ್ದಾಗಿ ನಡೆಸಿಕೊಂಡರೆ ಅವರು ಒಂದು ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಚೆಲುವರಾಯಸ್ವಾಮಿ ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ವಾಸು ಹೋರಾಟಗಾರರು. ಅವರು ಸ್ವತಂತ್ರವಾಗಿ ಸ್ಪರ್ಧಿಸುವ ಸನ್ನಿವೇಶ ಸೃಷ್ಟಿಸಿದ್ದು ಜೆಡಿಎಸ್.ಅಂಥವರನ್ನು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ. ಅದನ್ನು ವಾಸು ಕೂಡ ಹೇಳಿಕೊಂಡಿದ್ದಾರೆ. ಹಾಗಿದ್ದಾಗ ವಾಸು ಬೇರೆ ಪಕ್ಷ ನೋಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ವಾಸು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ನಾನು ಕರೆದಿಲ್ಲ. ಜೆಡಿಎಸ್ ನಲ್ಲಿ ಸರಿಯಾಗಿ ನಡೆಸಿಕೊಳ್ಳದಿದ್ದಾಗ ಕಾಂಗ್ರೆಸ್ ಇಲ್ಲವೇ ಬಿಜೆಪಿ ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ಆದರೆ ವಾಸು ಬಿಜೆಪಿಯನ್ನು ನಿರಂತರವಾಗಿ ವಿರೋಧಿಸಿಕೊಂಡು ಬಂದವರು. ಹಾಗಾಗಿ ಕಾಂಗ್ರೆಸ್ ಆಯ್ಕೆ ಮಾಡಿಕೊಳ್ಳುವುದು ವಾಸು ಅವರಿಗೆ ಅನಿವಾರ್ಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ದೇವೇಗೌಡರ ಬಗ್ಗೆ ಅಭಿಮಾನವಿದೆ. ಪಕ್ಷದಲ್ಲಿ ಎಲ್ಲರನ್ನೂ ಚನ್ನಾಗಿ ನೋಡಿಕೊಂಡರು. ಪಕ್ಷವೂ ಚನ್ನಾಗಿದೆ. ಆದರೆ ಎಚ್.ಡಿ.ಕುಮಾರಸ್ವಾಮಿ ಅವರು ಬಂದ ಮೇಲೆ ಎಲ್ಲವೂ ಅಯೋಮಯವಾಗಿದೆ ಎಂದರು.