ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರು ಕಾಂಗ್ರೆಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ 13 ಪ್ರತಿಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರಪತಿ ಚುನಾವಣೆಗೆ ಒಮ್ಮತದ ಅಭ್ಯರ್ಥಿಯನ್ನು ನಿರ್ಧರಿಸಲು ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಅವರು ಕರೆದಿದ್ದ ಸಭೆಗೆ ಸಂಸತ್ತಿನ ಅನೆಕ್ಸ್ ನಲ್ಲಿ ಸೇರಿದ ಪ್ರತಿಪಕ್ಷಗಳ ನಾಯಕರು ಸಿನ್ಹಾ ಅವರ ಹೆಸರನ್ನು ಒಪ್ಪಿಕೊಂಡರು. ಶೀಘ್ರವೇ ಈ ಕುರಿತು ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪವಾರ್, ಗೋಪಾಲಕೃಷ್ಣ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲಾ ಅವರು ಸ್ಪರ್ಧೆಯಿಂದ ಹೊರಗುಳಿದ ನಂತರ ಸಿನ್ಹಾ ಹೆಸರು ಕೇಳಿಬಂದಿದೆ.
ಸಭೆಯಲ್ಲಿ ಕಾಂಗ್ರೆಸ್, ಎನ್.ಸಿ.ಪಿ, ಟಿಎಂಸಿ, ಸಿಪಿಐ, ಸಿಪಿಎಂ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್, ಎಐಎಂಐಎಂ, ಆರ್.ಜೆ.ಡಿ ಮತ್ತು ಎಐಯುಡಿಎಫ್ ಪಕ್ಷದ ನಾಯಕರು ಭಾಗಿಯಾಗಿದ್ದರು.
ಕಾಂಗ್ರೆಸ್ ನ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಡಿಎಂಕೆಯ ತಿರುಚಿ ಶಿವ, ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಸಿಪಿಐನ ಡಿ.ರಾಜಾ ಸಭೆಯಲ್ಲಿ ಭಾಗವಹಿಸಿದ್ದರು.
ಐದು ಪ್ರಾದೇಶಿಕ ಪಕ್ಷಗಳನ್ನು ಆಲಿಪ್ತ ಎಂದು ಪರಿಗಣಿಸಲಾಗಿದೆ. ಟಿಆರ್.ಎಸ್. ಬಿಜೆಪಿ, ಆಮ್ ಆದ್ಮಿ ಪಕ್ಷ, ಎಸ್.ಎ.ಡಿ ಮತ್ತು ವೈಎಸ್.ಆರ್.ಸಿ.ಪಿ ಸಭೆಯಿಂದ ದೂರ ಉಳಿದಿವೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೂನ್ 15 ರಂದು ಕರೆದಿದ್ದ ಸಭೆಯಿಂದಲೂ ಈ ಪಕ್ಷಗಳು ದೂರ ಉಳಿದಿದ್ದವು.