ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಕೆಲಸ ಶಾಸಕರು ಅಜ್ಞಾತ ಸ್ಥಳಕ್ಕೆ ಹೋಗಿದ್ದು ಶಿಂಧೆ ಶಿವಸೇನೆಯ ಶಾಸಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಪಕ್ಷದ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ. ಮಧ್ಯಪ್ರದೇಶ, ರಾಜಸ್ಥಾನದ ಸನ್ನಿವೇಶ ರಾಜ್ಯದಲ್ಲಿ ಪುನರಾವರ್ತಿಸುವ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಕೆಲವು ಶಾಸಕರು ಮುಂಬೈನಲ್ಲಿ ಇಲ್ಲದಿರುವುದು ನಿಜ ಮತ್ತು ಅವರಲ್ಲಿ ಕೆಲವರನ್ನು ರಾತ್ರಿಯಿಂದ ತಲುಪಲು ಸಾಧ್ಯವಾಗುತ್ತಿಲ್ಲ. ಆದರೆ ತಪ್ಪು ತಿಳುವಳಿಕೆಯಿಂದ ನಗರದಿಂದ ಹೊರಗೆ ಹೋದ ಕೆಲವು ಶಾಸಕರೊಂದಿಗೆ ಸಂಪರ್ಕವನ್ನು ಸ್ಥಾಪಿಸಿದ್ದೇವೆ. ಏಕನಾಥ ಶಿಂಧೆ ಕೂಡ ನಗರದಿಂದ ಹೊರಗಿದ್ದು ಅವರನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ಭೂಕಂಪ ಸಂಭವಿಸಲಿದೆ ಎಂಬ ಊಹಾಪೋಹಗಳು ನಡೆಯುವುದಿಲ್ಲ. ಪ್ರಸ್ತುತ ಸಂಶಯಾಸ್ಪದ ವಾತಾವರಣವನ್ನು ತಿಳಿಗೊಳಿಸಲಾಗುವುದು. ಶೀಘ್ರದಲ್ಲೇ ನಾವು ಸಿಎಂ ಉದ್ದವ್ ಠಾಕ್ರೆ ಅವರನ್ನು ಭೇಟಿ ಮಾಡಲು ಹೋಗುತ್ತಿದ್ದೇವೆ. ಎಲ್ಲಾ ಎಂವಿಎ ನಾಯಕರು ಪರಸ್ಪರ ಸಂಪರ್ಕದಲ್ಲಿದ್ದಾರೆ ಎಂದು ರಾವುತ್ ತಿಳಿಸಿದ್ದಾರೆ.
ಉದ್ದವ್ ಠಾಕ್ರೆ ಸರ್ಕಾರ ಪತನವಾಗಲಿ ಎಂಬ ಆಶಯದೊಂದಿಗೆ ಮಹಾರಾಷ್ಟ್ರದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನದ ಮಾಧರಿಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ. ಆದರೆ ಅವರು ಮಾಡುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಬಿಜೆಪಿಯಿಂದ ಶಿವಸೇನೆಯನ್ನು ದುರ್ಬಲಗೊಳಿಸಲು ಷಡ್ಯಂತ್ರ ನಡೆಯುತ್ತಿದೆ. ಅದು ನಡೆಯುವುದಿಲ್ಲ ಎಂದು ಹೇಳಿದ್ದಾರೆ.
ಏಕನಾಥ್ ಶಿಂಧೆ ನಿಷ್ಠಾವಂತ ಶಿವಸೈನಿಕರು ಮತ್ತು ಸಹೋದ್ಯೋಗಿ. ಅವರ ಬಗ್ಗೆ ಏನು ಹೇಳಿದರೂ ನಾವು ಅವರೊಂದಿಗೆ ಮಾತನಾಡದ ಹೊರತು ನಾನು ಅದರ ಬಗ್ಗೆ ಏನನ್ನೂ ಹೇಳಲಾರೆ ಎಂದಿದ್ದಾರೆ.
2019ರಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನಾವಿಸ್ ಸರ್ಕಾರ ರಚನೆಯನ್ನು ನೆನಪಿಸಿಕೊಂಡ ರಾವತ್ ‘ರಾಜಕೀಯದಲ್ಲಿ ನಾವು ಅಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಎರಡೂವರೆ ವರ್ಷಗಳ ಹಿಂದೆ ಬಿಜೆಪಿ ಇದೇ ರೀತಿಯ ಪ್ರಯೋಗವನ್ನು ಮಾಡಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಆದ್ದರಿಂದ ಅವರು ಈಗ ಅದೇ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದು ಹಿಂಬಾಗಿಲ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಸರ್ಕಾರ ಬೀಳಿಸುವ ಸಂಚು ನಡೆದಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ. ಶಿಂಧೆ ಒಬ್ಬ ನಿಷ್ಠಾವಂತ ಶಿವಸೈನಿಕ ಎಂದು ಶ್ಲಾಘಿಸಿದ್ದಾರೆ.