ಸಶಸ್ತ್ರ ಪಡೆಗಳ ಹೊಸ ನೇಮಕಾತಿ ಯೋಜನೆಯ ವಿರುದ್ಧದ ಪ್ರತಿಭಟನೆಗಳು ಗುರುವಾರ ಹಿಂಸಾಚಾರಕ್ಕೆ ತಿರುಗಿದ್ದು ಆಕಾಂಕ್ಷಿಗಳು ಬಿಹಾರ, ಹರಿಯಾಣ, ನವದೆಹಲಿ, ಜಮ್ಮು ಮತ್ತು ಜಾರ್ಖಂಡ್ ನ ಹಲವು ಭಾಗಗಳಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.
ಅಗ್ನಿಪಥ್ ರಕ್ಷಣಾ ಪಡೆಗಳಿಗೆ ಕೇಂದ್ರ ಸರ್ಕಾರದ ಹೊಸ ನೇಮಕಾತಿ ನೀತಿಯಾಗಿದ್ದು ಇದರ ಅಡಿಯಲ್ಲಿ 17.5 ರಿಂದ 21 ವರ್ಷ ವಯಸ್ಸಿನ ಸುಮಾರು 45 ಸಾವಿರ ಜನರನ್ನು ನಾಲ್ಕು ವರ್ಷಗಳ ಅವಧಿಗೆ ಸೇವೆಗಳಿಗೆ ಸೇರ್ಪಡೆ ಮಾಡಲಾಗುತ್ತದೆ. ಹೀಗಾಗಿ ಹಿಂದಿನ ನೇಮಕಾತಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರು ಹಲವು ಕಡೆಗಳಲ್ಲಿ ರೈಲುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿದ್ದು, ಬಸ್ ಗಳ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಆಡಳಿತಾರೂಢ ಬಿಜೆಪಿ ಶಾಸಕರು ಸೇರಿದಂತೆ ದಾರಿಹೋಕರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ದೆಹಲಿಯ ನಂಗ್ಲೋಯ್ ರೈಲು ನಿಲ್ದಾಣದಲ್ಲೂ ಪ್ರತಿಭಟನೆಗಳು ಕಂಡುಬಂದಿವೆ. ನೂರಾರು ಪ್ರತಿಭಟನಾಕಾರರು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದು, ತಾವಿ ಸೇತುವೆಯ ಮೇಲೆ ತಡೆ ಹಾಕಿದ್ದರಿಂದ ಜಮ್ಮುವಿನಲ್ಲಿ ಇದೇ ರೀತಿಯ ದೃಶ್ಯಗಳು ಬಿ.ಸಿ.ರೋಡ್ ನಲ್ಲಿರುವ ಸೇನೆಯ ನೇಮಕಾತಿ ಕಚೇರಿಯ ಹೊರಗೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.
ಹರ್ಯಾಣದ ಗುರುಗ್ರಾಮ್, ರೇವಾರಿ ಮತ್ತು ಪಲ್ವಾಲ್ ನಲ್ಲಿ ನೂರಾರು ಯುವಕರು ಯೋಜನೆ ವಿರುದ್ಧ ಬೀದಿಗಿಳಿದಿದ್ದಾರೆ. ಪಲ್ವಾಲ್ ನಲ್ಲಿ ಕಲ್ಲು ತೂರಾಟ ನಡೆಸಿ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 19ರ ಆಗ್ರಾ ಚೌಕ್ ಅನ್ನು ನಿರ್ಬಂಧಿಸಲಾಗಿದೆ.
ಅಗ್ನಿವೀರರಾಘಿ ಸೇವೆ ಸಲ್ಲಿಸಿದ ನಂತರ ಉದ್ಯಮಿಗಳಾಗಲು ಬಯಸುವವರಿಗೆ ಆರ್ಥಿಕ ಪ್ಯಾಕೇಜ್ ಮತ್ತು ಬ್ಯಾಂಕ್ ಸಾಲ ಯೋಜನೆ ಮತ್ತು ಮುಂದೆ ಓದಲು ಬಯಸುವವರಿಗೆ 12ನೇ ತರಗತಿಗೆ ಸಮಾನ ಪ್ರಮಾಣಪತ್ರ ಮತ್ತು ಹೆಚ್ಚಿನ ವ್ಯಾಸಂಗಕ್ಕಾಗಿ ಬ್ರಿಡ್ಜಿಂಗ್ ಕೋರ್ಸ್ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.