ಮಾಜಿ ಸಚಿವ ಎಂ.ರಘುಪತಿ ಅವರು ಶನಿವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಮೃತರು ಅಪಾರ ಬಂಧುಗಳು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.
ರಘುಪತಿ ಅವರು ಮಲ್ಲೇಶ್ವರ ಮತ್ತು ಶಿವಾಜಿ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು.
ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಎಂ.ರಘುಪತಿ ಅವರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಎನ್.ಟಿ.ರಾಮರಾವ್ ಅವರ ಆತ್ಮೀಯರಲ್ಲಿ ಒಬ್ಬರಾಗಿದ್ದರು.
ರಾಮಕೃಷ್ಣ ಹೆಗಡೆಯವರ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದರು. ಅಲ್ಲದೆ ಮೀನುಗಾರಿಕೆ, ಕಾರ್ಮಿಕ ಮತ್ತು ಆಹಾರ ಹಾಗೂ ವಾರ್ತಾ ಇಲಾಖೆಯ ಸಚಿವರಾಗಿಯೂ ಕೆಲಸ ನಿರ್ವಹಿಸಿದ್ದರು.
ಶಿಕ್ಷಕರ ಸಮಸ್ಯೆಗಳು ಬಂದಾಗ ಮುಂದೆ ಬಂದು ಹೋರಾಟ ಮಾಡಿದವರು. ಖಾಸಗಿ ಕಾಲೇಜುಗಳನ್ನು ವಶಕ್ಕೆ ಪಡೆದು ಸರ್ಕಾರಿ ಕೆಲಸಕ್ಕೆ ನೇಮಿಸಿದ ಕೀರ್ತಿಯೂ ಎಂ.ರಘುಪತಿಯವರಿಗೆ ಸಲ್ಲುತ್ತದೆ.
ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಸಂಜಯ್ ಗಾಂಧಿಯವರಿಗೂ ಆತ್ಮೀಯರಾಗಿದ್ದರು. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ.ಆರ್. ಅವರಿಗೂ ಆಪ್ತರಾಗಿದ್ದರು.