ಅಗ್ನಿ ಪಥ್ ವಿರೋಧಿಸಿ ಎರಡನೇ ದಿನವೂ ಪ್ರತಿಭಟನೆ ಮುಂದುವರೆದಿದೆ. ಆಕ್ರೋಶಗೊಂಡಿರುವ ಪ್ರತಿಭಟನಾಕಾರರು ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ನಡುವೆ ಬಿಜೆಪಿ ಶಾಸಕಿ ಅರುಣಾ ದೇವಿ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ ಕಾರಿನ ಮೇಲೆ ದಾಳಿ ನಡೆಸಿರುವ ಘಟನೆ ನವಾಡದಲ್ಲಿ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅರುಣಾದೇವಿ ಜಿಲ್ಲಾ ಕೇಂದ್ರವಾದ ನಾವಡ ನಗರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಅವರ ಕಾರು ನವಾಡ ರೈಲು ನಿಲ್ದಾಣದ ರೈಲ್ವೆ ಕ್ರಾಸಿಂಗ್ ತಲುಪಿದಾಗ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೂ ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ಆವರ ಕಾರು ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಗ್ನಿಪಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು ಬಿಜೆಪಿಯ ನವಾಡ ಕಚೇರಿಗೆ ನುಗ್ಗಿ ಹಲವು ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ. ಬಿಜೆಪಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ. 300ಕ್ಕೂ ಹೆಚ್ಚು ಕುರ್ಚಿಗಳು, ಹಲವು ದಾಖಲೆಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ.
ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಸಿದ್ವಾಲಿಯಾ ರೈಲು ನಿಲ್ದಾಣದಲ್ಲಿ ಆಂದೋಲನ ನಡೆಸುತ್ತಿರುವವರು ಪ್ಯಾಸೆಂಜರ್ ರೈಲಿನ ಮೂರು ಬೋಗಿಗಳಿಗೆ ಬೆಂಕಿ ಹಚ್ಚಿ ಕಿಡಿಕಾರಿದ್ದಾರೆ.
ಛಾಪ್ರಾದಲ್ಲಿ ಪ್ರತಿಭಟನಾಕಾರರು 12 ರೈಲುಗಳ ಮೇಲೆ ದಾಳಿ ಮಾಡಿದ್ದಾರೆ. ಅವುಗಳಲ್ಲಿ ಮೂರಕ್ಕೆ ಬೆಂಕಿ ಹಚ್ಚಿದ್ದಾರೆ. ಕೈಮೂರ್ ನಲ್ಲಿ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ್ದಾರೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ಗುರುವಾರ ಬಿಹಾರದಾದ್ಯಂತ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಅಗ್ನಿಪಥ್ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆದಿದ್ದು, ವಿಧ್ವಂಸಕ ಕೃತ್ಯಗಳನ್ನು ನಡೆಸಿದ್ದಾರೆ.
ರಕ್ಷಣಾ ಪಡೆಗಳಲ್ಲಿ ನಾಲ್ಕು ವರ್ಷಗಳ ಸೇವೆ ಸಲ್ಲಿಸಿದ ನಂತರ ವಿದ್ಯಾರ್ಥಿಗಳನ್ನು ಅಪರಾಧ ಚಟುವಟಿಕೆಗಳಿಗೆ ತಳ್ಳಲು ಕೇಂದ್ರ ಸರ್ಕಾರವು ಬಯಸುತ್ತದೆ. ಎಂದು ಛಾಪ್ರಾದಲ್ಲಿ ಧರಣಿ ನಿರತ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.