ಜಿಲ್ಲಾ ಜಲ ಸಂವಾದ ಕಾರ್ಯಕ್ರಮದಲ್ಲಿ ವಿಷಯದ ಕುರಿತು ಮಾತನಾಡುವುದು ಬಿಟ್ಟು ರಾಜಕೀಯ ಮಾತನಾಡಲು ಆರಂಭಿಸಿದ ಸಂಸದ ಜಿ.ಎಸ್.ಬಸವರಾಜ ಅವರಿಗೆ ರೈತ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ತುಮಕೂರಿನ ಕನ್ನಡ ಭವನದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ಜೂನ್ 16ರಂದು ಜಲ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸದ ಜಿ.ಎಸ್. ಬಸವರಾಜು ಅವರನ್ನು ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಲು ಶುರು ಮಾಡಿದ ಬಸವರಾಜು ಜಲ ಸಂವಾದದ ಕುರಿತು ಮಾತನಾಡುವುದು ಬಿಟ್ಟು ರಾಜಕೀಯ ಮಾತನಾಡಲು ಆರಂಭಿಸಿದರು.
ಇದನ್ನು ಕೇಳಿಸಿಕೊಂಡು ಸ್ವಲ್ಪ ಹೊತ್ತು ತಾಳ್ಮೆಯಿಂದ ಇದ್ದ ರೈತ ಮುಖಂಡರು ಬಸವರಾಜು ಅವರು ರಾಜಕೀಯ ವಿಷಯವನ್ನೇ ಪ್ರಮುಖ ವಿಷಯವಾಗಿ ಮಾತನಾಡಲು ಶುರು ಮಾಡಿದರು. ಆಗ ರೈತ ಮುಖಂಡರ ತಾಳ್ಮೆಯ ಕಟ್ಟೆ ಒಡೆಯಿತು. ಕುಳಿತಲ್ಲಿಂದಲೇ ಮೇಲೆದ್ದ ರೈತ ಮುಖಂಡರು ಬಸವರಾಜು ಅವರ ರಾಜಕೀಯ ಮಾತನಾಡುವುದನ್ನು ಆಕ್ಷೇಪಿಸಿದರು.
ಇದು ರಾಜಕೀಯ ವೇದಿಕೆಯಲ್ಲ. ಜಲ ಸಂವಾದವನ್ನು ಏರ್ಪಡಿಸಲಾಗಿದೆ. ಜಲದ ಸಂರಕ್ಷಣೆ, ಬಳಕೆಯ ಕುರಿತು ಮಾತನಾಡಿ, ಅದು ಬಿಟ್ಟು ರಾಜಕೀಯ ಮಾತನಾಡುತ್ತೀರಾ. ರಾಜಕೀಯ ಮಾತನಾಡುವುದಾದರೆ ಭಾಷಣ ನಿಲ್ಲಿಸಿ ಎಂದು ಏರುದನಿಯಲ್ಲಿ ಕೂಗಿ ಹೇಳಿದರು.
ಇದರಿಂದ ಗಲಿಬಿಲಿಗೊಂಡ ಸಂಸದ ಜಿ.ಎಸ್.ಬಸವರಾಜು ಸಮರ್ಥನೆ ಮಾಡಿಕೊಳ್ಳಲು ಹೋದರು. ಆದರೆ ಇದಕ್ಕೆ ಬಗ್ಗದ ರೈತ ಮುಖಂಡರು ಜಲ ಸಂವಾದದ ಕುರಿತು ಮಾತನಾಡಿ, ಇಲ್ಲದೇ ಹೋದರೆ ನಿಮ್ಮ ರಾಜಕೀಯ ಭಾಷಣವನ್ನು ಯಾರೂ ಕೇಳುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಹೀಗಾಗಿ ಬಸವರಾಜು ಸ್ವಲ್ಪ ಹೊತ್ತು ಜಲದ ಬಳಕೆಯ ಕುರಿತು ಮಾತನಾಡಿ ಭಾಷಣ ಮೊಟುಕುಗೊಳಿಸಿದರು.