ತುಮಕೂರು ಜಿಲ್ಲೆಯಲ್ಲಿ ನಡೆದಿರುವ ದಲಿತರ ಹತ್ಯೆ ಪ್ರಕರಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಇಂದು ದಿಢೀರ್ ಸಮಾವೇಶಗೊಂಡ ದಲಿತ ಸಂಘಟನೆಗಳ ಕಾರ್ಯಕರ್ತರು ಸಚಿವ ಅರಗ ಜ್ಞಾನೇಂದ್ರ ಕಾರಿಗೆ ಮುತ್ತಿಗೆ ಹಾಕಿ ಜಿಲ್ಲೆಯಲ್ಲಿ ಪದೇಪದೇ ದಲಿತರ ಮೇಲೆ ಹಲ್ಲೆ ನಡೆಯುತ್ತಿವೆ. ಕೊಲೆಗಳು ನಡೆದಿವೆ. ಈ ಎಲ್ಲಾ ಪ್ರಕರಗಣಗಳನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ತಿಂಗಳಲ್ಲಿ ಮೂವರು ದಲಿತರ ಕೊಲೆಯಾಗಿದೆ. ಪೆದ್ದನಹಳ್ಳಿ ಘಟನೆಯಲ್ಲಿ ಇಬ್ಬರು ದಲಿತ ಯುವಕರು ಹತ್ಯೆಯಾಗಿದ್ದಾರೆ. ಇಂದು ಗುಬ್ಬಿಯಲ್ಲಿ ಹಾಡಹಗಲೇ ದಲಿತ ಮುಖಂಡ ನರಸಿಂಹಮೂರ್ತಿಯ ಹತ್ಯೆಯಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ದಲಿತರ ಹತ್ಯೆ ನಡೆಯುತ್ತಿದ್ದರೂ ಗೃಹ ಸಚಿವರು ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ ಮಾತನಾಡಿ ಪದೇಪದೇ ದಲಿತರ ಹತ್ಯೆಗಳು ನಡೆಯುತ್ತಿವೆ. ಆದರೂ ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪೆದ್ದನಹಳ್ಳಿ ಜೋಡಿ ಹತ್ಯೆ ಮಾಸುವ ಮುನ್ನವೇ ಗುಬ್ಬಿಯಲ್ಲಿ ಇಂದು ನರಸಿಂಹಮೂರ್ತಿಯ ಕೊಲೆಯಾಗಿದೆ. ತುರುವೇಕೆರೆಯಲ್ಲೂ ಹತ್ಯೆ ನಡೆದಿದೆ. ಒಂದು ಪ್ರಕರಣವನ್ನೂ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿಲ್ಲ ಎಂದು ದೂರಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಮುಖಂಡ ಕೊಟ್ಟಶಂಕರ್ ಮಾತನಾಡಿ ಜಿಲ್ಲೆಯಲ್ಲಿ ದಲಿತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ರಾಜ್ಯದ ಬಿಜೆಪಿ ಸರ್ಕಾರ ಹತ್ಯೆ ಮತ್ತು ದೌರ್ಜನ್ಯವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ದಲಿತರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳುವ ಸರ್ಕಾರ ಮಾತಿಗೆ ತಪ್ಪಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕದ ಸಂಚಾಲಕ ನರಸಿಂಹಮೂರ್ತಿ, ದಲಿತ ಮುಖಂಡರಾದ ಕೇಬಲ್ ರಘು, ಪಿ.ಎನ್.ರಾಮಯ್ಯ, ಮರಳೂರು ಕೃಷ್ಣ ಮೊದಲಾದವರು ಇದ್ದರು.