ದುಷ್ಕರ್ಮಿಗಳ ಗುಂಪೊಂದು ಹಾಡಹಗಲೇ ದಲಿತ ಮುಖಂಡರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ನಡೆದಿದೆ. ಕೊಲೆಯಾದ ದಲಿತ ಮುಖಂಡರನ್ನು ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.
ನರಸಿಂಹಮೂರ್ತಿ ಡಿಎಸ್ಎಸ್ ತಾಲ್ಲೂಕು ಸಂಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಎಂದಿನಂತೆ ಗುಬ್ಬಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ಟೀ ಅಂಗಡಿ ಬಳಿ ಕುಳಿತು ದಲಿತರ ಕುಂದು ಕೊರತೆಗಳನ್ನು ಆಲಿಸುತ್ತಿದ್ದರು. ಇಂದು ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳ ಗುಂಪು ನರಸಿಂಹಮೂರ್ತಿ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಮಾರಕಾಸ್ತ್ರಗಳನ್ನು ಹೊಂದಿದ್ದ ದುಷ್ಕರ್ಮಿಗಳು ನರಸಿಂಹಮೂರ್ತಿಯ ಮುಖ ಗುರುತು ಸಿಗದಂತೆ ಕತ್ತರಿಸಿ ಹಾಕಿದ್ದಾರೆ. ತಲೆಗೆ ಹಲವು ಬಾರಿ ಮಾರಕಾಸ್ತ್ರಗಳಿಂದ ಹೊಡೆದು ಗಾಯಗೊಳಿಸಿದೆ. ಆತನ ಬಲಗೈಯನ್ನು ತುಂಡು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಬ್ಬಿ ತಾಲೂಕಿನಲ್ಲಿ ದಲಿತರ ಹತ್ಯೆ ಪ್ರಕರಣಗಳು ಹೆಚ್ಚಾಗಿದ್ದು ಜನ ಭಯಭೀತರಾಗುವಂತೆ ಮಾಡಿದೆ. ಪೆದ್ದನಹಳ್ಳಿ ಇಬ್ಬರು ದಲಿತ ಯುವಕರ ಕೊಲೆ ಪ್ರಕರಣ ಹಸಿರಾಗಿರುವಾಗಲೇ ಮತ್ತೊಂದು ದಲಿತ ಮುಖಂಡನ ಹತ್ಯೆಯಾಗಿದೆ.
ಪದೇ ಪದೇ ದಲಿತರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ನಡೆಯುತ್ತಿದ್ದು ದಲಿತರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಎಂದು ಡಿಎಸ್ಎಸ್ ಮುಖಂಡರು ಆರೋಪಿಸಿದ್ದಾರೆ.