ರಾಷ್ಟ್ರಮಟ್ಟದಲ್ಲಿ ನಮ್ಮ ನಾಯಕರು ಯಾವುದೇ ತಪ್ಪು ಮಾಡದಿದ್ದರೂ ಸುಳ್ಳು ಕೇಸ್ ದಾಖಲಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ. ಹೊಸ ದರ್ಬಾರ್ ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು, ತಿಲಕರು ಹಾಗೂ ಪಟೇಲರು ಸ್ವಾತಂತ್ರ್ಯ ಹೋರಾಟದ ಸಂದರ್ಭಧಲ್ಲಿ ಜನರಲ್ಲಿ ಅರಿವು ಮೂಡಿಸಲು ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬರಲಾಗಿದೆ. ಕಾಂಗ್ರೆಸ್ ನಾಯಕರೆಲ್ಲರೂ ಇದರ ನಿರ್ವಹಣೆಗೆ ಹಣ ನೀಡಿದ್ಆಋಎ. ಈ ಸಂಸ್ಥೆ ಟ್ರಸ್ಟ್ ಮೂಲಕ ನಡೆಯುತ್ತಿದೆಯೇ ಹೊರತು ಇದನ್ನು ಯಾವುದೇ ನಾಯಕರು ತಮ್ಮ ಆಸ್ತಿ ಎಂದು ಹೇಳಿಕೊಂಡಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರು ಆ ಸಂಸ್ಥೆಯ ಮುಖ್ಯಸ್ಥರಾಗುತ್ತಾರೆ. ನಮ್ಮ ನಾಯಕರ ಚುನಾವಣಾ ಅಫಿಡವಿಟ್ ಗಳನ್ನು ಪರಿಶೀಲಿಸಿ ಯಂಗ್ ಇಂಡಿಯಾ ಕಂಪನಿಯಾಗಲೀ, ಎಜಿಎಲ್ ಕಂಪನಿಗಳ ಮಾಲೀಕತ್ವವನ್ನು ಯಾರೂ ಹೇಳಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಕಚೇರಿಗೆ ಹೋಗುವ ನಾಯಕರನ್ನು ಬಂಧಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ಆಧಾರದ ಮೇಲೆ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ. ಇದನ್ನು ತುರ್ತು ಪರಿಸ್ಥಿತಿ ಎನ್ನುವ ಬದಲು ಇದಕ್ಕೆ ಹೊಸ ದರ್ಬಾರ್ ಎಂಬ ಹೆಸರು ಸೂಕ್ತ ಎಂದರು.
ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ನಮ್ಮ ನಾಯಕರನ್ನು ಮುಗಿಸಲು ಪ್ರಯತ್ನಿಸುತ್ತಿರುವುದು ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸ್ಸಿಗರು ದೇಶದ ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ನೀಡಿದ್ದು, ಎಲ್ಲಾ ರೀತಿಯ ತ್ಯಾಗ ಹೋರಾಟಕ್ಕೂ ಸಿದ್ದವಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾವು ಎಲ್ಲಿ ಕಳ್ಳತನ ಮಾಡಿದ್ದೇವೆ. ನಾವೇನು ಲಂಚಕ್ಕೆ ಹೋಗಿದ್ದೇವಾ, ಮಂಚಕ್ಕೆ ಹೋಗಿದ್ದೇವಾ? ಈ ಸರ್ಕಾರ ಮತ್ತು ಸಚಿವರು 40ರಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿಲ್ಲವೇ? ಕಮಿಷನ್ ಗಾಗಿ ಕಿರುಕುಳ ನೀಡಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಯಿತು. ಸಚಿವರು ರಾಜಿನಾಮೆ ನೀಡಿಲ್ಲವೇ ಎಂದು ಹೇಳಿದರು.