ಮೋದಿ ಪ್ರಧಾನಿಯಾದ ನಂತರ ಸರ್ಕಾರದ ಎಲ್ಲಾ ಸ್ವತಂತ್ರ ಸಂಸ್ಥೆಗಳನ್ನು ತಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಆರ್.ಬಿಐ, ಸಿಎಜಿ, ಸಿಬಿಐ, ಇಡಿ, ಎನ್ಎಸ್ಎಸ್ಒ ಎಲ್ಲಾ ಸಂಸ್ಥೆಗಳನ್ನು ಇವರ ತಾಳಕ್ಕೆ ಕುಣಿಯುವಂತೆ ಮಾಡಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ, ಇಡಿ ವಿಭಾಗವನ್ನು ವಿರೋಧ ಪಕ್ಷಗಳ ಮೇಲೆ ಛೂ ಬಿಡಲು ಇಟ್ಟುಕೊಂಡಿದೆ. ದೇಶದ ಇತಿಹಾಸದಲ್ಲಿ ಇಂತಹ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡ ನಿದರ್ಶನಗಳಿಲ್ಲ ಎಂದು ಹೇಳಿದ್ದಾರೆ.
ದೇಶದ ಪ್ರಗತಿಯ ಅಂಕಿಅಂಶಗಳು ಸಿಗಬಾರದು ಎಂದು ಎನ್ಎಸ್ಎಸ್ಒ ನಿಷ್ಕ್ರಿಯಗೊಳಿಸಿ ಯೋಜನಾ ಆಯೋಗ ತೆಗೆದು ತಾಳಕ್ಕೆ ಕುಣಿಯುವ ನೀತಿ ಆಯೋಗ ರಚಿಸಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಹತ್ತಿಕ್ಕುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು, ಇಡೀ ದೇಶದಲ್ಲಿ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಮೇಲೆ ಇಡಿ ಮೂಲಕ ಸುಳ್ಳು ಕೇಸ್ ನಲ್ಲಿ ಕಿರುಕುಳ ನೀಡುವ ಕೆಲಸ ಮೋದಿ ಮಾಡಲು ಹೊರಟಿದ್ದಾರೆ. ಇದರ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.
ಆರ್.ಎಸ್.ಎಸ್ ನವರು ಹೆಡಗೆವಾರ್, ಗೋಲ್ವಾಲ್ಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಿಮಗೆ ಯಾವ ಯೋಗ್ಯತೆ ಇದೆ. 1942ರ ಕ್ವಿಟ್ ಇಂಡಿಯಾ ಹೋರಾಟದಲ್ಲಿ ನಿಮ್ಮ ಆರ್.ಎಸ್.ಎಸ್ ಸಂಚಾಲಕರು ಮುಖಂಡರು ಬ್ರಿಟಿಷರ ಜೊತೆ ಸೇರಿಕೊಂಡು ಸಂಚು ಮಾಡಿ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದ್ದರು ಎಂಬುದನ್ನು ಮರೆಯಲು ಸಾಧ್ಯವಿಲ್ಲ ಎಂದು ಆರೋಪಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನ್ಯಾಷನಲ್ ಹೆರಾಲ್ಡ್ ಸಹಾಯ ಮಾಡಿದೆ. ಕಾಂಗ್ರೆಸ್ ನಾಯಕರು ತ್ಯಾಗಬಲಿದಾನ ಮಾಡಿದ್ದಾರೆ. ಬಿಜೆಪಿಯವರಿಗೆ ತ್ಯಾಗ ಎಂದರೆ ಗೊತ್ತಾ? ನೀವು ಯವತ್ತಾದರೂ ಅದನ್ನು ಮಾಡಿದ್ದೀರಾ? ನೀವು ನಮಗೆ ದೇಶಭಕ್ತಿ ಪಾಠ ಹೇಳಿಕೊಡಲು ಬರುತ್ತೀರಾ? ಇಂದು ಇಡೀ ದೇಶ ಲೂಟಿ ಹೊಡೆದು ಹಾಳು ಮಾಡುತ್ತಿದ್ದೀರಿ ಎಂದು ಜರಿದರು.