ಎನ್ಎಸ್.ಯುಐ ಕಾರ್ಯಕರ್ತರು ತಿಪಟೂರಿನಲ್ಲಿ ಸಚಿವ ನಾಗೇಶ್ ಅವರ ಮನೆಯ ಗೇಟುಬಾಗಿಲು ತೆಗೆದಿದ್ದರಿಂದ ಕಾಂಪೌಂಡ್ ಒಳಗೆ ಹೋಗಿ ಪೊಲೀಸರ ಎದುರು ಚೆಡ್ಡಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆಯೇ ಹೊರತು ಮನೆಗೆ ಬೆಂಕಿ ಹಚ್ಚಿಲ್ಲ. ಆದರೂ ಸರ್ಕಾರದ ಒತ್ತಡದ ಮೇರೆಗೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಗಂಭೀರ ಪ್ರಕರಣಗಳನ್ನು ದಾಖಲಿಸಿರುವುದನ್ನು ವಾಪಸ್ ಪಡೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಎನ್ಎಸ್.ಯುಐ ಸಂಘಟನೆಯ ವಿದ್ಯಾರ್ಥಿಗಳು ಸಚಿವ ನಾಗೇಶ್ ಮನೆಯ ಕಾಂಪೌಂಡ್ ಒಳಗೆ ಅತಿಕ್ರಮವಾಗಿ ಪ್ರವೇಶ ಮಾಡಿಲ್ಲ. ಅಕ್ರಮವಾಗಿ ಸಭೆಯನ್ನು ಸೇರಿಲ್ಲ. ಆದರೂ ವಿದ್ಯಾರ್ಥಿಗಳನ್ನು ಬಂದಿಸಿದ್ದು ಸರಿಯಲ್ಲ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಬಿಜೆಪಿ ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ರೌಡಿಶೀಟರ್ ಗಳು ಎನ್.ಎಸ್.ಯು.ಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಹಾಗಾಗಿ ಅವರ ಮೇಲೆ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಪ್ರತಿಭಟನೆ ಅಂದ ಮೇಲೆ 20-30 ಮಂದಿ ಸೇರುವುದು ಸಹಜ. ಹಾಗೆಯೇ ತಿಪಟೂರಿನ ಸಚಿವ ನಾಗೇಶ್ ಮನೆಯ ಮುಂದೆ ಎನ್.ಎಸ್.ಯು.ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಜನರ ಮೂಲಭೂತ ಹಕ್ಕು. ಪ್ರತಿಭಟನೆ ನಡೆಸಿದವರನ್ನು ಬಂಧಿಸಿ ಬಿಡುವಂತಹ ಕೆಲಸವನ್ನು ಮಾಡಬೇಕಿತ್ತು. ಆದರೆ ಪೊಲೀಸರು ಸರ್ಕಾರದ ಒತ್ತಡಕ್ಕೆ ಮಣಿದು ಬಂಧಿಸಿರುವುದು ಸೂಕ್ತವಲ್ಲ ಎಂದು ಹೇಳಿದರು.
ಪ್ರತಿಭಟನೆಗೆ ಅವಕಾಶ ಕೊಡದಿದ್ದರೆ ಅಲ್ಲಿ ಗೂಂಡಾಗಿರಿಗೆ ಅವಕಾಶವಿರುತ್ತದೆ. ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುತ್ತದೆ. ತಿಪಟೂರಿನಲ್ಲಿ ಆಗಿರುವ ಸಣ್ಣ ಘಟನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ, ಕಾಂಗ್ರೆಸ್ ಬೆಂಬಲಿತ ಎನ್.ಎಸ್.ಯು.ಐ ಕಾರ್ಯಕರ್ತರು ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಬಂದಿದ್ದರು ಎಂದು ಹಸಿ ಸುಳ್ಳು ಹೇಳಿದ್ದಾರೆ. ಸರ್ಕಾರ ದ್ವೇಷ ಸಾಧಿಸುತ್ತಿದೆ. ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರಬೇಕು ಎಂದರು.
ಶಿವಮೊಗ್ಗದಲ್ಲಿ ಕೆ.ಎಸ್.ಈಶ್ರರಪ್ಪ 144 ನೇ ಸೆಕ್ಷನ್ ಉಲ್ಲಂಘಿಸಿ ಪ್ರತಿಭಟನೆ ನಡೆಸಿದರು. ಪ್ರಕರಣ ದಾಖಲಿಸಲಿಲ್ಲ. ಬಂಧಿಸಲೂ ಇಲ್ಲ. ಖೂಬ 144ನೇ ಸೆಕ್ಷನ್ ಉಲ್ಲಂಘಿಸಿದ್ದರೂ ಬಂಧಿಸಲಿಲ್ಲ. ಆದರೆ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ರದ್ದುಪಡಿಸುವಂತೆ ಪ್ರತಿಭಟನೆ ನಡೆಸಿದ ಎನ್.ಎಸ್.ಯು.ಐ ಸಂಘಟನೆಯ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಇದು ನ್ಯಾಯವೇ. ಇದು ಬಿಜೆಪಿಯ ದ್ವಂದ್ವ ನೀತಿಯಲ್ಲವೇ ಎಂದು ಕಿಡಿಕಾರಿದರು.
ಎನ್.ಎಸ್.ಯು.ಐ ಸಂಘದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಗೂಂಡಾವರ್ತನೆ ತೋರಿರುವ ಬಿಜೆಪಿ ಬೆಂಬಲಿಗರ ಮೇಲೆ ಪ್ರಕರಣ ದಾಖಲಿಸಿ ಬಂಧಿಸದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ. ಚೆಡ್ಡಿಯನ್ನು ಸುಡಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.