ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಿಎಂ ಪಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವುದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರವು ಹೊಂದಿದೆ. ಈ ಹಿನ್ನೆಲೆಯಲ್ಲಿ ಮೇಲೆ ತಿಳಿಸಿದಂತೆ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪುರವರ ನಾಡಗೀತೆಯನ್ನು ಆಕ್ಷೇಪಾರ್ಹವಾಗಿ ವಿಕೃತಿಗೊಳಿಸಿದ ಅಂಶವು ಪಠ್ಯಪುಸ್ತಕಗಳಲ್ಲಿ ಉಲ್ಲೇಖಗೊಳ್ಳದಿದ್ದರೂ ಇದರ ಮೂಲ ಕವನ ಬರೆದ ವ್ಯಕ್ತಿಗಳ ಬಗ್ಗೆ ಕಾನೂನಾತ್ಮಕ ತನಿಖೆಯ ಕ್ರಮವನ್ನು ಸರ್ಕಾರವು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಪ್ರೊ.ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ಸಮಿತಿಯು ರಚಿಸಿದ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ರಾಷ್ಟ್ರಕವಿ ಕುವೆಂಪುರವರ ಕುರಿತಾದ ಏಳು ಗದ್ಯ ಪದ್ಯಗಳಿದ್ದು ಸೀಮಿತವಾಗಿದ್ದನ್ನು ಪ್ರಸ್ತುತ ಪರಿಷ್ಕರಣಾ ಸಮಿತಿ ರಚಿಸಿರುವ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ 10ಕ್ಕೆ ಏರಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ನಾಡಪ್ರಭು ಕೆಂಪೇಗೌಡರ ಕುರಿತಾದ ಪಾಠವನ್ನು ಹೊಸದಾಗಿ ಸೇರ್ಪಡೆ ಮಾಡಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಹಿಂದಿನ ಪಠ್ಯಪುಸ್ತಕಗಳಲ್ಲಿ ಪರಿಚಯಿಸಲಾಗಿದ್ದ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಜೊತೆ ಹಿಂದೂ ಧರ್ಮದ ವಿಷಯವನ್ನು ಸೇರ್ಪಡೆ ಮಾಡಿ ಪರಿಚಯಿಸಲಾಗಿದೆ ಎಂದು ಹೇಳಿದ್ದಾರೆ.
ಆದಿಚುಂಚನಗಿರಿ ಪೀಠದ ನಿರ್ಮಲಾನಂದ ಸ್ವಾಮಿಗಳು ಮತ್ತು ಇತರರ ಆಶಯದಂತೆ ರಾಷ್ಟ್ರಕವಿ ಕುವೆಂಪುರವರ ವಿರಚಿತ ನಾಡಗೀತೆಯನ್ನು ವಿಕೃತಗೊಳಿಸುವ ರೀತಿಯಲ್ಲಿ ನಾಡಗೀತೆಯ ದಾಟಿಯಲ್ಲಿ ಮೂಲ ಕವನವನ್ನು ಬರೆದ ವ್ಯಕ್ತಿಗಳ ವಿರುದ್ದ ಕಾನೂನು ಕ್ರಮ ತೆಗೆದುಕೊಳ್ಳಲು ಸೈಬರ್ ಕ್ರೈಮ್ ಬೆಂಗಳೂರು ಇವರಿಗೆ ತನಿಖೆಯನ್ನು ನಡೆಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.