ಪಠ್ಯಪುಸ್ತಕಗಳ ಪರಿಷ್ಕರಣೆ ನೆಪದಲ್ಲಿ ಶಾಲಾ ಪಠ್ಯಗಳನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದ್ದು ಪಠ್ಯಪುಸ್ತಕದಿಂದ ನನ್ನ ಕವಿತೆಯನ್ನು ಹಿಂಪಡೆಯುತ್ತೇನೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಪ್ರಾಧಮಿಕ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಬಸವಣ್ಣನವರ ಕುರಿತು ತಪ್ಪು ಮಾಹಿತಿ ನೀಡುವುದು, ಮಹಾನ್ ದಾರ್ಶನಿಕ ಕವಿ ಕುವೆಂಪು ಅವರನ್ನು ಅವಮಾನಿಸುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ ಎಂದು ಕಿಡಿಕಾರಿದ್ದಾರೆ.

ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯತೀತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಸ್ವಸ್ಥ ಸಮಾಜಕ್ಕಾಗಿ ಮುಂದಿನ ಪೀಳಿಗೆಯನ್ನು ತಯಾರು ಮಾಡುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಕ್ಷೇತ್ರ ಅನವಶ್ಯಕ ವಿದ್ಯಮಾನಗಳಿಂದ ದಾಳಿಗೊಳಗಾಗಿರುವುದು ವಿಷಾದನೀಯ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು, ಗುರಿ ಮಾಡುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಐದನೆಯ ತರಗತಿಗೆ ಪಠ್ಯವಾಗಿರುವ ನನ್ನ ಕವಿತೆಗೆ ಎಂಬ ಕವಿತೆಗೆ ನೀಡಿರುವ ನನ್ನ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.


