ಬುಡಕಟ್ಟು ಸಂಸ್ಕೃತಿಯನ್ನು ಹೊಂದಿರುವ ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಪಟ್ಟಿಗೆ ಸೇರಿಸುವುದರ ಜೊತೆಗೆ ಕೇಂದ್ರ ಸರ್ಕಾರ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಒತ್ತಾಯಿಸಿದ್ದಾರೆ.
ತಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಡುಗೊಲ್ಲರ ಸತತ ಹೋರಾಟದ ಫಲವಾಗಿ 2018ರಲ್ಲಿ ಅಂದಿನ ಸರ್ಕಾರ ಕಾಡುಗೊಲ್ಲ ಸಮುದಾಯವನ್ನು ಅಲೆಮಾರಿ ಮತ್ತು ಅರೆ ಅಲೆಮಾರಿ ಜಾತಿ ಪಟ್ಟಿಗೆ ಸೇರಿಸಿದೆ. ಜೊತೆಗೆ ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದರು. ಆದರೂ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂದರು.
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅಂದರೆ 2020ರ ಡಿಸೆಂಬರ್ ನಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದರು. ಆದರೆ ಇದುವರೆಗೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ಉಪಚುನಾವಣೆ ವೇಳೆ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಜನಾಂಗದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು.
ಸರ್ಕಾರ 15 ದಿನಗಳ ಒಳಗೆ ನಿಗಮಕ್ಕೆ ಅಧ್ಯಕ್ಷರನ್ನು ನೇಮಕ ಮಾಡಬೇಕು. ಸಮುದಾಯವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಮುಂದಿನ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯದ ಚಿತ್ರದುರ್ಗ, ತುಮಕೂರು, ಬಳ್ಳಾರಿ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಮತಗಳು ನಿರ್ಣಾಯಕವಾಗಿವೆ. ಹೀಗಿದ್ದರೂ ಸಹ ಸರ್ಕಾರ ನಮ್ಮನ್ನು ನಿರ್ಲಕ್ಷ್ಯ ಮಾಡಿದೆ ಎಂದು ಟೀಕಿಸಿದರು.
ಕಳೆದ 30 ವರ್ಷಗಳಿಂದ ಹೆಣ್ಣು ಮಕ್ಕಳಿಗಾಗಿ ಒಂದು ಪ್ರತ್ಯೇಕ ಹಾಸ್ಟೆಲ್ ನೀಡುವಂತೆ ಮನವಿ ಮಾಡಿದ್ದರೂ ಯಾವುದೇ ಸರ್ಕಾರಗಳು ಗಮನಹರಿಸಿಲ್ಲ. ಹಾಗಾಗಿ ರಾಜ್ಯದ ಪ್ರತಿ ಕಾಡುಗೊಲ್ಲರ ಹಟ್ಟಿಗಳೀಗೆ ಪ್ರವಾಸ ಮಾಡಿ ಅವರಿಗೆ ಅರಿವು ಮೂಡಿಸುವ ಕೆಲಸವನ್ನು ಸಂಘ ಮಾಡಲಿದೆ ಎಂದು ಹೇಳಿದರು.
ಇದುವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಅಧಿಕಾರ ಪಡೆಯಲು ಮೀಸಲಾತಿ ಇತ್ತು. ಆದರೆ ಈಗ ಒಬಿಸಿಗಳಿಗೆ ರಾಜಕೀಯ ಮೀಸಲಾತಿ ಕೊಡುವ ನಿಟ್ಟಿನಲ್ಲಿ ತಡೆ ನೀಡಲಾಗಿದೆ. ಇದು ಮೀಸಲಾತಿಯನ್ನು ತೆಗೆಯುವ ಸಂಚಾಗಿದೆ. ಸರ್ಕಾರ ಕೂಡಲೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸಿ ಮೀಸಲಾತಿ ನೀಡಲು ಸುಪ್ರೀಂಕೋರ್ಟ್ ಗೆ ಸಲ್ಲಿಸುವಂತೆ ಆಗ್ರಹಿಸಿದರು.