1994-95ರಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಹಾಳುಮಾಡಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಕುರುಬರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ 1994-95ರವರೆಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಇರಲಿಲ್ಲ. ಹಾಗಾಗಿ ಹಿಂದುಳಿದ ವರ್ಗಗಳಿಗೆ ಶೇ.35 ಮತ್ತು ಮಹಿಳೆಯರಿಗೆ 50ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಮೀಸಲಾತಿಯನ್ನು ತೆಗೆದುಹಾಕಲು ಯತ್ನಿಸುತ್ತಿದೆ ಎಂದು ದೂರಿದರು.
ಹಿಂದುಳಿದ ವರ್ಗದವರು, ಬಡವರು, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ ದೊರೆಯಲಿದೆ. ಬಿಜೆಪಿ ಮತ್ತು ಜೆಡಿಎಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ದವಾಗಿ ನಡೆದುಕೊಳ್ಳುತ್ತಿವೆ ಎಂದು ಆರೋಪಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 162 ಕೋಟಿ ರೂಪಾಯಿ ವೆಚ್ಚ ಮಾಡಿ ಹಿಂದುಳಿದ ವರ್ಗಗಳ ಅಧ್ಯಕ್ಷ ಕಾಂತರಾಜು ಅವರ ಕಡೆಯಿಂದ ಹಿಂದುಳಿದ ವರ್ಗಗಳ ಜಾತಿಗಣತಿ ಮಾಡಿಸಿದೆ. ಆದರೆ ವರದಿಯನ್ನು ಸ್ವೀಕರಿಸಲು ಬಿಜೆಪಿ ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಕಾಂತರಾಜು ವರದಿ ಅನುಷ್ಠಾನಕ್ಕೆ ಬಂದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಜಾತಿಗಳಿಗೆ ಎಷ್ಟೆಷ್ಟು ಪಾಲು ಸಿಗಬೇಕು ಎಂಬುದು ಗೊತ್ತಾಗಲಿದೆ ಎಂದರು.
ಸಮಾಜದಲ್ಲಿ ಸಾವಿರಾರು ಜಾತಿಗಳಿವೆ. ಅದರಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು ಹೀಗೆ ಬೇರೆಬೇರೆ ಜಾತಿಯಲ್ಲಿರುವ ಬಡವರು ಹಿಂದಿನಿಂದಲೂ ಅವಕಾಶ ವಂಚಿತರಾಗಿದ್ದಾರೆ. ದೇಶದ ಸಂಪತ್ತು, ಅಧಿಕಾರವನ್ನು ಎಲ್ಲ ಜಾತಿ, ಧರ್ಮದವರಿಗೆ ಹಂಚಿಕೆ ಮಾಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಸಮಾಜದಲ್ಲಿ ಎಲ್ಲಾ ಬಡವರಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕು. ನನ್ನ ಅಧಿಕಾರ ಅವಧಿಯಲ್ಲಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ. ಅನ್ನಭಾಗ್ಯ ಕೇವಲ ಕುರುಬರಿಗೆ ಕೊಟ್ಟಿದ್ದಲ್ಲ. ಬ್ರಾಹ್ಮಣ, ಕ್ಷತ್ರಿಯ, ದಲಿತ, ಹಿಂದುಳಿದ, ಲಿಂಗಾಯತ ಮತ್ತು ಅಲ್ಪಸಂಖ್ಯಾತರಿಗೆ ನೀಡಿದ್ದೇನೆ ಎಂದು ತಿಳಿಸಿದರು.