Sunday, December 22, 2024
Google search engine
Homeಮುಖಪುಟಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರದ್ದತಿಗೆ ಪೋಷಕರು, ಚಿಂತಕರ ಒಕ್ಕೊರಲ ಆಗ್ರಹ

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರದ್ದತಿಗೆ ಪೋಷಕರು, ಚಿಂತಕರ ಒಕ್ಕೊರಲ ಆಗ್ರಹ

ರಾಜ್ಯ ಬಿಜೆಪಿ ಸರ್ಕಾರ ರಚಿಸಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಕೂಡಲೇ ರದ್ದುಗೊಳಿಸಬೇಕು. ಹಿಂದಿನ ಪಠ್ಯಪುಸ್ತಕವನ್ನೇ ಮುಂದುವರಿಸಬೇಕು ಎಂದು ತುಮಕೂರಿನಲ್ಲಿ ನಡೆದ ಪೋಷಕರು, ಚಿಂತಕರ ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.

ಈಗಿನ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಕೈಬಿಟ್ಟಿರುವ ಪಠ್ಯಗಳನ್ನು ಮುಂದುವರಿಸಬೇಕು. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ರೂಪಿಸಿರುವ ಪಠ್ಯಪುಸ್ತಕವನ್ನು ಸಿಬಿಎಸ್.ಸಿ ಸಿಲಬಸ್ಸನ್ನಾಗಿ ಅಳವಡಿಸಿಕೊಂಡಿದೆ. ಹಾಗಿದ್ದಾಗ ರಾಜ್ಯ ಸರ್ಕಾರವೇಕೆ ಅದನ್ನು ಪರಿಷ್ಕರಿಸಲು ಹೊರಟಿರುವುದಾದರೂ ಏಕೆ ಎಂದು ಸಭೆಯಲ್ಲಿ ಪ್ರಶ್ನಿಸಲಾಯಿತು.

ಹಿಂದಿನ ಪಠ್ಯಪುಸ್ತಕವನ್ನು ಮುಂದುವರಿಸಿಕೊಂಡು ಹೋಗಬೇಕು. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಮೇ 31ರಂದು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ ನೀಡಬೇಕೆಂದು ಪೋಷಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯವನ್ನು ರೂಪಿಸುವಾಗ ರಾಜಕೀಯವನ್ನು ಬೆರೆಸಬಾರದು. ಆದರೆ ಈಗಿನ ಸರ್ಕಾರ ಪಠ್ಯಪುಸ್ತಕದಲ್ಲಿ ಮಾರ್ಪಾಡುಗಳನ್ನು ಮಾಡಲು ಹೊರಟು ರಾಜಕೀಕರಣಗೊಳಿಸುತ್ತಿದೆ. ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ರಚನೆಯನ್ನು ರಾಜಕೀಯ ಗೊಳಿಸಬಾರದು ಎಂದು ಪೋಷಕರು ಮತ್ತು ಚಿಂತಕರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪಠ್ಯಪುಸ್ತಕ ಪರಿಸ್ಕರಣಾ ಸಮಿತಿಯಲ್ಲಿ ಒಂದೇ ಜಾತಿಯವರೇ ತುಂಬಿಹೋಗಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಿಗೆ ಯಾವುದೇ ಅರ್ಹತೆ ಇಲ್ಲ. ನಾನು ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಅಲ್ಲ ಎಂದು ಸ್ವತಃ ರೋಹಿತ್ ಚಕ್ರತೀರ್ಥ ಅವರೇ ಹೇಳಿಕೊಂಡಿದ್ದಾರೆ. ಆದರೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷರ ಸಮರ್ಥನೆಗೆ ಇಳಿದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕೆಗಳು ಸಭೆಯಲ್ಲಿ ವ್ಯಕ್ತವಾದವು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣೆಯ ಮೂಲಕ ಮಕ್ಕಳಿಗೆ ವಿಷವುಣಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಗೊಳಿಸಬೇಕು. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಹಲವು ಉದಾಹರಣೆಗಳ ಮೂಲಕ ಹೇಳಿದರು.

ಸಭೆಯಲ್ಲಿ ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಸಾಹಿತಿ ಎನ್.ನಾಗಪ್ಪ, ನಿವೃತ್ತ ಶಿಕ್ಷಕ ಗೋವಿಂದಯ್ಯ, ನರೇಂದ್ರ ನಾಯಕ್, ಸಹ ಪ್ರಾಧ್ಯಾಪಕ ಓ.ನಾಗರಾಜ್, ಪೋಷಕರಾದ ನರಸಿಂಹಮೂರ್ತಿ, ಪಂಡಿತ್ ಜವಾಹರ್, ವಿದ್ಯಾರ್ಥಿ ಯುವಜನ ಸಂಘಟನೆಯ ಕಲ್ಯಾಣಿ, ಎಸ್.ಎನ್.ಸ್ವಾಮಿ, ವಕೀಲ ಎಸ್.ರಮೇಶ್ ಮೊದಲಾದವರು ಹಾಜರಿದ್ದು ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular