ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್ ಅವರು ತಮ್ಮ ಇಲಾಖೆ ಹಗರಣಗಳ ವಿಚಾರಗಳ ಬಗ್ಗೆ ಯಾರೂ ದನಿ ಎತ್ತಬಾರದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲರನ್ನು ಭೇಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್ ಅವರ ನಿವಾಸಕ್ಕೆ ಸಚಿವ ಅಶ್ವತ್ಥನಾರಾಯಣ್ ಭೇಟಿ ನೀಡಿದ್ದಾರೆ. ಅವರು ಸಹಜವಾಗಿಯೇ ಇದೊಂದು ಖಾಸಗಿ ಭೇಟಿ, ನಾವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಲಹೆ ಪಡೆಯಲು ಎಂ.ಬಿ.ಪಾಟೀಲರ ಮನೆಗೆ ಹೋಗಿದ್ದೆ ಎಂಬ ಸಬೂಬು ನೀಡುತ್ತಾರೆ. ಈ ವಿಚಾರವಾಗಿ ಚರ್ಚೆ ಮಾಡುವುದು ಬೇಡ. ಅವರನ್ನೇ ಕೇಳಿ ಎಂದರು.
ಬಿ.ಕೆ.ಹರಿಪ್ರಸಾದ್ ಹಿರಿಯ ನಾಯಕರು. ಅವರ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಬಾರದು. ಭಯೋತ್ಪಾದಕರು ಎಂದರೆ ಅಶಾಂತಿ ಮಾಡಿಸುವವರು. ಎರಡು ಜಾತಿಗಳ ನಡುವೆ, ಎರಡು ಧರ್ಮಗಳ ನಡುವೆ ದ್ವೇಷದ ಕಿಚ್ಚು ಹಚ್ಚುವವರು ಎಂಬರ್ಥದಲ್ಲಿ ಮಾತನಾಡಿದ್ದಾರೆ. ಆದರೆ ಸರ್ಕಾರ ಒಂದು ಕಡೆ ಮಗುವನ್ನು ಚಿವುಟಿ ಮತ್ತೊಂದು ಕಡೆ ತೊಟ್ಟಿಲು ತೂಗುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಹಾಗೂ ಗೃಹ ಇಲಾಖೆ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡರೆ ಇಂತಹ ಘಠನೆಗಳು ಹೇಗೆ ನಡೆಯುತ್ತವೆ. ಸರ್ಕಾರ ಕೇವಲ ಚುನಾವಣೆ ದೃಷ್ಟಿಕೋನದಲ್ಲಿ ಈ ಪ್ರಕರವಣವನ್ನು ನೋಡಬಾರದು. ರಾಜ್ಯದ ಇತಿಹಾಸ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.
ರಸಗೊಬ್ಬರ, ಬೆಲೆ ಏರಿಕೆ, ರೈತರಿಗೆ ನೀಡುವ ಬೆಂಬಲ ಬೆಲೆ, ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳದ ಬಗ್ಗೆ ಸರ್ಕಾರ ಗಮನಹರಿಸಬೇಕು. ಅಡುಗೆ ಅನಿಲ 50 ರೂ ಹೆಚ್ಚಿಸುತ್ತಿರುವಾಗ ಹಾಲು ಉತ್ಪಾದಕರಿಗೆ ನಾಲ್ಕು ರೂಪಾಯಿ ಹೆಚ್ಚು ನೀಡಿದರೆ ಏನಾಗುತ್ತದೆ. ಗೋವುಗಳಿಗೆ ಹಾಕುವ ಪೀಡ್ 600 ರೂಗಳಿಂದ 1200 ಗಳಿಗೆ ಏರಿಕೆಯಾಗಿದೆ. ಹೀಗಾದರೆ ರೈತರು ಬದುಕುವುದಾದರೆ ಹೇಗೆ ಎಂದು ಪ್ರಶ್ನಿಸಿದರು.