ತುಮಕೂರಿನ ಹೃದಯ ಭಾಗದಲ್ಲಿರುವ ಜೂನಿಯರ್ ಕಾಲೇಜು ಮೈದಾನ ಅನವಶ್ಯಕ ಕಟ್ಟಡಗಳಿಂದ ಕಿರಿದಾಗುತ್ತಿರುವುದು ವಿಷಾದನೀಯ. ಕಳೆದ ಎರಡು ಮೂರು ದಿನಗಳಿಂದ ಜೂನಿಯರ್ ಕಾಲೇಜ್ ಮೈದಾನ ಮತ್ತೆ ಸುದ್ದಿಯಲ್ಲಿ ಇರುವುದರಿಂದ ನನ್ನ ಕೆಲವು ಅನುಮಾನಗಳಿಗೆ ಉತ್ತರ ಅಪೇಕ್ಷಿಸುತ್ತಿದ್ದೇನೆ ಎಂದು ಜನಸಂಗ್ರಾಮ ಪರಿಷತ್ ಜಿಲ್ಲಾಧ್ಯಕ್ಷ ಪಂಡಿತ್ ಜವಹಾರ್ ಆಗ್ರಹಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಆಗತಾನೆ ಜೂನಿಯರ್ ಕಾಲೇಜು ಮೈದಾನದಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಕಟ್ಟಡದ ಚಟುವಟಿಕೆ ಪ್ರಾರಂಭವಾದ ತಕ್ಷಣ ಮೈದಾನವನ್ನು ಇರುವ ಹಾಗೆ ಉಳಿಸಿಕೊಳ್ಳಬೇಕೆಂದು ನಾವು ಶಾಸಕರಿಗೆ ಮನವಿ ಸಲ್ಲಿಸಿ ವಿನಂತಿಸಿದ್ದೆವು.
ನಗರದ ಮಧ್ಯಭಾಗದಲ್ಲಿರುವ ಈ ಮೈದಾನ ಸುಮಾರ್ 45 ಎಕರೆ ವಿಸ್ತೀರ್ಣ ಹೊಂದಿದ್ದು ಕ್ರೀಡಾ ಚಟುವಟಿಕೆಗಳ ಜೊತೆ ರಾಜಕೀಯ, ಸಾಂಸ್ಕೃತಿಕ, ವ್ಯಾಪಾರ, ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನ, ಪುಸ್ತಕ ಮಾರಾಟ, ರೈತರ ಮೇಳ, ಹಿಂದೂ ಸಮಾಜೋತ್ಸವ, ದಸರ ಹಬ್ಬದ ಚಟುವಟಿಕೆಗಳು, ವಿಶ್ವ ಯೋಗ ದಿನ ಮುಂತಾದವು ನಿರಂತರವಾಗಿ ಈ ಮೈದಾನದಲ್ಲಿ ನಡೆಯುತ್ತಿದ್ದು, ತುಮಕೂರಿನ ಜನತೆ ಈ ಮೈದಾನದ ಜೊತೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಈ ಮೈದಾನದ ವಿಸ್ತೀರ್ಣ ಚಿಕ್ಕದಾಗಬಾರದು. ಹಾಗೆ ಉಳಿಯಬೇಕೆಂದು ಸಾರ್ವಜನಿಕರು ಆಪೇಕ್ಷಿಸುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ಜೂನಿಯರ್ ಕಾಲೇಜು ಮೈದಾನ ಅನವಶ್ಯಕವಾದ ಕಟ್ಟಡಗಳಿಂದ ಚಿಕ್ಕದಾಗುತ್ತ ಬರುತ್ತಿದೆ. ಖೋ ಖೋ ಮತ್ತು ಕಬಡ್ಡಿ ದೇಶೀಯ ಕ್ರೀಡೆಗಳಿಗೆ ಈ ಮೈದಾನದಲ್ಲಿ ಜಾಗ ಕೊಡಬೇಕಾಗಿತ್ತು. ಕೊಟ್ಟಿದ್ದಾರೆ ಮತ್ತು ನಿರ್ಮಾಣ ಕೆಲಸ ನಡೆಯುತ್ತಿದೆ. ಅದಕ್ಕೆ ನಮ್ಮ ಸಹಮತವಿದೆ ಎಂದು ತಿಳಿಸಿದ್ದಾರೆ.
ಮೈದಾನದ ಒಳಭಾಗದಲ್ಲಿ ಮೂರು ಶೌಚಾಲಯಗಳನ್ನು ಕಟ್ಟಿ ಎಲ್ಲದಕ್ಕೂ ಬೀಗ ಹಾಕಲಾಗಿದೆ. ಸುಮಾರು 2 ಕೋಟಿ ವೆಚ್ಚದಲ್ಲಿ ವಾಕಂಗ್ ಪಾತ್ ಮಾಡಲಾಗಿದೆ. ಅದು ಉಪಯೋಗವಿಲ್ಲದಂತೆ ಆಗಿದೆ. ವೇದಿಕೆ ಪಕ್ಕ ಕ್ರೀಡಾಪಟುಗಳಿಗೆ ತರಬೇತಿ ಕೊಡಲು 38 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ಕಟ್ಟಲಾಗಿದೆ ಮತ್ತು ಅದಕ್ಕೆ ಬೀಗ ಹಾಕಲಾಗಿದೆ ಎಂದು ಗಮನ ಸೆಳೆದಿದ್ದಾರೆ.
ಜೂನಿಯರ್ ಕಾಲೇಜಿಗೆ ಬರಲು ಇದ್ದ ಒಂದು ರಸ್ತೆಯನ್ನು ಮುಚ್ಚಿ ಅಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ಬ್ಯಾನಿಯನ್ ಟ್ರೀ ಕಟ್ಟಲಾಗಿದೆ. ಈ ಬ್ಯಾನಿಯನ್ ಟ್ರೀಯಿಂದ ಯಾರಿಗೆ ಏನು ಉಪಯೋಗವಾಗಿದೆ ಎಂದು ಶಾಸಕರು ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈಗ ವೇದಿಕೆ ಹಿಂದಿರುವ ಕಾಂಪೌಂಡ್ ಒಡೆಯಲಾಗಿದೆ. ವೇಧಿಕೆ ಹಿಂದೆ ಸುಮಾರು 4 ಸಾವಿರ ಅಡಿ ಕಟ್ಟಡ ಕಟ್ಟಲು ಮಾರ್ಕ್ ಮಾಡಲಾಗಿದೆ. ಇದರಿಂದ ಒಳಗಡೆ ಇರುವ ಮೈದಾನದ ವಿಸ್ತೀರ್ಣವು ಚಿಕ್ಕದಾಗುತ್ತದೆ. 4 ಸಾವಿರ ಅಡಿ ಜಾಗದಲ್ಲಿ ಕಟ್ಟುವ ಕಟ್ಟಡ ಈ ಮೈದಾನಕ್ಕೆ ಖಂಡಿತ ಬೇಡ. ಅದರಿಂದ ಯಾರಿಗೆ ಯಾವ ಅನುಕೂಲವೂ ಆಗವುದಿಲ್ಲ. ಇದು ಸ್ಮಾರ್ಟ್ ಸಿಟಿ ಅಧಿಕಾರಿಗಳು ನಗರದ ಜನತೆಗೆ ಮಾಡುವ ಮೋಸವಾಗಿದೆ ಎಂದು ಹೇಳಿದ್ದಾರೆ.
ಎಲ್ಲರನ್ನೂ ಒಳಗೊಂಡು ನಗರದ ಜನತೆಯ ಜೊತೆ ಮುಕ್ತವಾಗಿ ಚರ್ಚಿಸಿ ಎಲ್ಲರ ಅಭಿಪ್ರಾಯದಂತೆ ಸ್ಮಾರ್ಟ್ ಸಿಟಿ ನಿರ್ಮಾಣವಾಗಬೇಕೆಂಬುದು ಪ್ರಧಾನಿಯವರ ಆಶಯವಾಗಿದೆ. ಆದರೆ ಇಲ್ಲಿ ಜನತೆಯಿಂದ ಕೆಲವು ವಿಷಯಗಳನ್ನು ಮುಚ್ಚಿಟ್ಟು ಸ್ಮಾರ್ಟ್್ ಸಿಟಿ ಅಧಿಕಾರಿಗಳು ಕಟ್ಟಡವನ್ನು ಕಟ್ಟಿ ಪ್ರಧಾನಿಯವರ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದಾರೆ. ಈ ಉದ್ದೇಶಿತ ಕಟ್ಟಡವನ್ನು ಕೂಡಲೇ ನಿಲ್ಲಿಸಬೇಕೆಂದು ಜವಹಾರ್ ಮನವಿ ಮಾಡಿದ್ದಾರೆ.