ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕು ಅಪ್ಪಸಂದ್ರದ ಗುಂಡಿಕಾವಲ್ ತೋಟದ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪರಿಣಾಮ ಮನೆಯಲ್ಲಿದ್ದ 30 ಸಾವಿರ ಕೊಬ್ಬರಿ ಸುಟ್ಟು ಭಸ್ಮವಾಗಿದೆ.
ದಲಿತ ಈಶ್ವರ್ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು ಪರಾರಿಯಾಗಿದ್ದು ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮನೆಯಲ್ಲಿದ್ದ ಬಟ್ಟೆ, ಒಡವೆ ವಸ್ತುಗಳೆಲ್ಲವೂ ಸಂಪೂರ್ಣವಾಗಿ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.
ಬಹಳ ಹಿಂದಿನಿಂದಲೂ ಈ ಮನೆಯ ಮೇಲೆ ಕಲ್ಲು ತೂರುವುದು, ವಿದ್ಯುತ್ ಸಂಪರ್ಕ ಕಡಿತ ಮಾಡುವುದು ಮಾಡುತ್ತಿದ್ದ ಕಿಡಿಗೇಡಿಗಳ ಬಗ್ಗೆ ಪೊಲೀಸರಿಗೆ ಮಾಹಿ ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಮನೆಯ ಮಾಲಿಕ ಈಶ್ವರ್ ಆರೋಪಿಸಿದ್ದಾರೆ.
ಗುರುವಾರ ಸ್ಥಳೀಯ ಎಂಎಲ್ಎ ಮನೆಯವರಿಗೆ ವಿಷಯ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಲಾಗಿದೆ. ಪೊಲೀಸರು ಎಂಎಲ್ಎ ಹೇಳಿದರೆ ಮಾತ್ರ ಬರುತ್ತಾರೆಂಬ ಆರೋಪವಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳನ್ನು ಬಂಧಿಸಿ ನ್ಯಾಯ ಕೊಡಿಸಬೇಕು. ಪೊಲೀಸ್ ಇಲಾಖೆ, ತಹಶೀಲ್ದಾರ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೊಂದಿರುವ ಅಸಹಾಯಕರಿಗೆ ಸೂಕ್ತ ನ್ಯಾಯ ಮತ್ತು ಪರಿಹಾರ ಕೊಡಿಸಿಕೊಡಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ರಕ್ಷಣಾ ಒಕ್ಕೂಟದ ಅಧ್ಯಕ್ಷ ಇಂದ್ರಯ್ಯ ಆಗ್ರಹಿಸಿದ್ದಾರೆ.