ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನಲ್ಲಿ ಸೌಭಾಗ್ಯಲಕ್ಷ್ಮಿ ಶುಗರ್ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಮಾಲಿಕ ರಮೇಶ್ ಜಾರಕಿಹೊಳಿ ಅಪೆಕ್ಸ್ ಬ್ಯಾಂಕುಗಳ ಅಡಿಯಲ್ಲಿ ಬರುವ 15 ಬ್ಯಾಂಕುಗಳಿಂದ 366 ಕೋಟಿ ಸಾಲ ಮಾಡಿದ್ದು ಯೂನಿಯನ್ ಬ್ಯಾಂಕಿನಿಂದ 20 ಕೋಟಿ ತೆರಿಗೆ ಇಲಾಖೆಯಿಂದ 200 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಒಟ್ಟು 660 ಕೋಟಿ ಸಾಲ ಹೊಂದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
2017ರಲ್ಲಿ ಅಪೆಕ್ಸ್ ಬ್ಯಾಂಕಿನವರು ಸೌಭಾಗ್ಯಲಕ್ಷ್ಮಿ ಶುಗರ್ಸ್ ಕಂಪನಿಯನ್ನು ಎನ್.ಪಿ.ಎ ಎಂದು ಘೋಷಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 11 ಲಕ್ಷ ಕೋಟಿಯಷ್ಟು ಸಾಲವನ್ನು ಎನ್.ಪಿ.ಎ ಎಂದು ಘೋಷಣೆ ಮಾಡಿ ಮನ್ನ ಮಾಡಲಾಗಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಮೊತ್ತದ ಎನ್.ಪಿ.ಎ ಆಗಿರುವ ಕಂಪನಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಎಂದು ಹೇಳಿದರು.
ನಂತರ ಬ್ಯಾಂಕಿನವರು ನಿಮ್ಮ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ನೋಟೀಸ್ ಜಾರಿಗೊಳಿಸುತ್ತಾರೆ. ಆಗ ಅವರು 2019ರವರೆಗೂ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಂತರ ಆ ನೋಟೀಸ್ ಅನ್ನು ಧಾರವಾಡ ಹೈಕೋರ್ಟ್ ನಲ್ಲಿ ದ್ವಸದಸ್ಯ ಪೀಠಕ್ಕೆ ತಡೆಯಾಜ್ಞೇ ನೀಡುವಂತೆ ಅರ್ಜಿ ಸಲ್ಲಿಸುತ್ತಾರೆ. ನಂತರ ನ್ಯಾಯಾಲಯ 28-11-2019ರಂದು ಮಧ್ಯಂತರ ತೀರ್ಪು ನೀಡಿ ನೀವು ಆರು ವಾರಗಳ ಒಳಗಾಗಿ 366 ಕೋಟಿ ಸಾಲದಲ್ಲಿ ಅರ್ಧದಷ್ಟು ಹಣವನ್ನು ಪಾವತಿಸಿ ನಂತರ ನ್ಯಾಯಾಲಯಕ್ಕೆ ಬನ್ನಿ ಎಂದು ಸೂಚಿಸುತ್ತದೆ.
ಆ ಆದೇಶಕ್ಕೆ ರಮೇಶ್ ಜಾರಕಿಹೊಳಿ ಅವರು ನಯಾಪೈಸೆ ಗೌರವ ನೀಡಲಿಲ್ಲ. ನಂತರ 2-12-2021ರಲ್ಲಿ ಅಪೆಕ್ಸ್ ಬ್ಯಾಂಕಿನ ಅಧ್ಯಕ್ಷ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಒಂದು ನೋಟೀಸನ್ನು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುತ್ತಾರೆ. ಆದರೆ ಜಿಲ್ಲಾಧಿಕಾರಿಗಳು ಕಳೆದ ಐದು ತಿಂಗಳಿಂದ ಈ ಪತ್ರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿದ್ದೆ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ರಮೇಶ್ ಜಾರಕಿಹೊಳಿ ಅವರು ಹರಿಯಂತ್ ಸಹಕಾರಿ ಬ್ಯಾಂಕಿಗೆ 20 ಕೋಟಿ ಸಾಲ ಹಾಗೂ ಬಡ್ಡಿ ಸೇರಿ ಒಟ್ಟು 35 ಕೋಟಿ ನೀಡಬೇಕು. ಹೀಗಾಗಿ ಬ್ಯಾಂಕಿನವರು ಎನ್.ಸಿ.ಎಲ್.ಟಿ ನ್ಯಾಯಾಧಿಕರಣಕ್ಕೆ ಮನವಿ ಸಲ್ಲಿಸಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಂಪನಿಯಿಂದ ತಮಗೆ ಬರಬೇಕಾದ ಸಾಲ ಕೊಡಿಸಿ ಎಂದು ಮನವಿ ಮಾಡಿದರು. ನಂತರ ನ್ಯಾಯಾಧಿಕರಣ ದಿವಾಳಿಯಾಗಿರುವ ಕಂಪನಿ ಆಸ್ತಿ ಹರಾಜು ಮಾಡಲು ಇನ್ಸಾಲ್ವೆನ್ಸಿ ಎಂಬ ಸಂಸ್ಥೆಗೆ ಸೂಚಿಸುತ್ತಾರೆ ಎಂದು ಹೇಳಿದರು.
ಈ ಹರಾಜು ಪ್ರಕ್ರಿಯೆ ಕುರಿತು ತಕರಾರು ಇದ್ದರೆ ಅದನ್ನು ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಿ ಪತ್ರಿಕೆಗಳಲ್ಲಿ ಜಾಹಿರಾತು ಪ್ರಕಟಿಸಬೇಕು. ಆದರೆ ಈ ಜಾಹಿರಾತನ್ನು ಪತ್ರಿಕೆಗಳಲ್ಲಿ ಪ್ರಕಟಿಸದೇ ಕೇವಲ ತಮ್ಮ ಜಯನಗರ ಕಚೇರಿ ಮುಂದೆ ಹಾಕಲಾಗಿದೆ. ಈ ಸಕ್ಕರೆ ಕಾರ್ಖಾನೆ ಇರುವುದು ಗೋಕಾಕ್ ತಾಲ್ಲೂಕಿನಲ್ಲ. ಆದರೆ ಈ ಪ್ರಕಟಣೆಯನ್ನು ಹಾಕಿರುವುದು ಬೆಂಗಳೂರಿನ ಜಯನಗರದ ಕಚೇರಿ ಮುಂದೆ ಎಂದು ತಿಳಿಸಿದರು.
ಈ ಹರಾಜು ಪ್ರಕ್ರಿಯೆಗೆ ಸರ್ಕಾರವಾಗಲಿ, ಅಪೆಕ್ಸ್ ಬ್ಯಾಂಕಿನವರಾಗಲೀ, ಅಲ್ಲಿನ ಸುತ್ತಮುತ್ತಲಿನವರಾಗಲಿ ಅಥವಾ ಅಲ್ಲಿನ ನೌಕರರಾಗಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಈ ಆಕ್ಷೇಪ ವ್ಯಕ್ತಪಡಿಸುವ ಕಾಲಾವಕಾಶ ನಿನ್ನೆಗೆ ಮುಕ್ತಾಯವಾಗಿದೆ ಎಂದರು.


