ಪಿಎಸ್ಐ ನೇಮಕಾತಿ ಅಕ್ರಮ ಬಯಲಿಗೆಳೆದ ಮಾಜಿ ಸಚಿವ ಕಾಂಗ್ರೆಸ್ ವಕ್ತಾರ ಪ್ರಿಯಾಂಕ ಖರ್ಗೆ ಅವರಿಗೆ ನಿಐಡಿ ನೋಟೀಸ್ ಜಾರಿ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಬಿಜೆಪಿ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರ ಸ್ತಂಭಗಳು. ನಾವು ವಿರೋಧ ಪಕ್ಷದಲ್ಲಿದ್ದು ರಾಜ್ಯದ ಎಲ್ಲೆಡೆ ಹಲವು ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಮಗೂ ಬೇರೆ ಬೇರೆ ಮೂಲಗಳಿಂದ ಭ್ರಷ್ಟಾಚಾರ, ಅಕ್ರಮ, ಅನ್ಯಾಯಗಳ ಬಗ್ಗೆ ಸಾಕಷ್ಟು ಮಾಹಿತಿಗಳು ಲಭ್ಯವಾಗುತ್ತವೆ ಎಂದರು.
ಇಂತಹ ದೂರು, ಅಹವಾಲುಗಳನ್ನು ಸ್ವೀಕರಿಸಲು ಸಾರ್ವಜನಿಕ ಅಹವಾಲು ಸಮಿತಿಯನ್ನೇ ರಚಿಸಲಾಗಿದೆ. ಅಹವಾಲು, ಸಮಸ್ಯೆ ಹೇಳಿಕೊಂಡವರಿಗೆ ಸಹಾಯ, ಅವರ ಪರ ದನಿ ಎತ್ತುವ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮೂರು ವರ್ಷದಿಂದ ಸರ್ಕಾರದ ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ಬಂದಿದೆ. ಒಂದೊಂದೇ ವಿಚಾರವನ್ನು ನಾವು ಸರ್ಕಾರ, ಸಾರ್ವಜನಿಕರ ಗಮನಕ್ಕೆ ತರುತ್ತಿದ್ದೇವೆ ಎಂದು ತಿಳಿಸಿದರು.
ಪಿಎಸ್ಐ ನೇಮಕ ಅಕ್ರಮ ವಿಚಾರವಾಗಿ ನಮಗೆ ಮಾಹಿತಿ ಬಂದಾಗ ಅಧಿವೇಶನದಲ್ಲಿ ನಮ್ಮ ಶಾಸಕರಿಂದ ಪ್ರಶ್ನೆ ಕೇಳಿಸಿದೆವು. ಆಗ ಗೃಹ ಸಚಿವರು ಯಾವುದೇ ಅಕ್ರಮ ನಡೆದಿಲ್ಲ ಎಂದು ಲಿಖಿತ ಉತ್ತರ ನೀಡಿದರು. ನಂತರ ಅನೇಕರು ನನ್ನನ್ನು ಭೇಟಿ ಮಾಡಿ ಯಾರಿಗೆ ಎಷ್ಟು ಅಂಕ ಬಂದಿದೆ ಎಂದು ಉತ್ತರ ಪತ್ರಿಕೆ ತೋರಿಸಿದರು ಎಂದು ಹೇಳಿದರು.
ಕಲಬುರ್ಗಿಗೆ ಸಂಬಂಧಿಸಿದ ಅಕ್ರಮದ ಬಗ್ಗೆ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಕೇವಲ ಶಾಸಕರಲ್ಲ. ಪಕ್ಷದ ವಕ್ತಾರರೂ ಹೌದು. ಕೆಲವು ವಿಚಾರವನ್ನು ಕೃಷ್ಣಭೈರೇಗೌಢರಿಂದ ಮತ್ತೆ ಕೆಲವು ವಿಚಾರವನ್ನು ಬಿ.ಎಲ್.ಶಂಕರ್ ಅವರಿಂದ ಮೈಸೂರಿನ ಲಕ್ಷ್ಮಣ್ ಅವರಿಂದ ಮಾತನಾಡಿಸಿದ್ದೇವೆ. ನಾನು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದೇವೆ. ಅದೇ ರೀತಿ ಪ್ರಿಯಾಂಕ್ ಖರ್ಗೆ ಮಾತನಾಡಿದ್ದಾರೆ. ಅದಕ್ಕೆ ನೋಟೀಸ್ ನೀಡಬೇಕೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ವಿದ್ಯಾರ್ಥಿಗಳು ಭವಿಷ್ಯ ಡೋಲಾಯಮಾನವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದೆ. ಅಶಾಂತಿ ಹೆಚ್ಚುತ್ತಿದೆ. ರಾಜಕೀಯ ಪಕ್ಷವಾಗಿ ನಾವು ಇದನ್ನೆಲ್ಲ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.