Thursday, September 19, 2024
Google search engine
Homeಜಿಲ್ಲೆಗುಬ್ಬಿ: ಇಬ್ಬರು ದಲಿತ ಯುವಕರ ಕೊಲೆಗೆ ನಂದೀಶ್ ಮಾಸ್ಟರ್ ಪ್ಲಾನ್ -ಆರೋಪ

ಗುಬ್ಬಿ: ಇಬ್ಬರು ದಲಿತ ಯುವಕರ ಕೊಲೆಗೆ ನಂದೀಶ್ ಮಾಸ್ಟರ್ ಪ್ಲಾನ್ -ಆರೋಪ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಹತ್ಯೆಗೆ ಆರೋಪಿ ನಂದೀಶ್ ಮಾಸ್ಟರ್ ಪ್ಲಾನ್ ರೂಪಿಸಿದ್ದನೆಂಬ ಆರೋಪ ಕೇಳಿಬಂದಿದೆ.

ಪೆದ್ದನಹಳ್ಳಿಯ ಗಿರೀಶ್ ತನ್ನ ಮನೆಯಲ್ಲಿ ಊಟ ಮಾಡಿ ಕೂತಿದ್ದಾಗ ಅಲ್ಲಿಗೆ ಬಂದ ನಂದೀಶ್ ಗರೀಶ್ ನನ್ನು ತೋಟವೊಂದಕ್ಕೆ ಕರೆದೊಯ್ದು ಇಬ್ಬರು ದಲಿತ ಯುವಕರು ಹತ್ಯೆಯಾದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆಂದು ಗ್ರಾಮಸ್ಥರಲ್ಲಿ ಚರ್ಚೆ ನಡೆಯುತ್ತಿದೆ. ಗಿರೀಶ್ ನನ್ನು ಮನೆಯಿಂದ ಕರೆದೊಯ್ಯದಿದ್ದರೆ ಈ ಪ್ರಕರಣವೇ ನಡೆಯುತ್ತಿರಲಿಲ್ಲ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ನೇತೃತ್ವದಲ್ಲಿ ಸತ್ಯಶೋಧನ ಸಮಿತಿ ಸದಸ್ಯರು ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿ ಗ್ರಾಮದ ಗಿರೀಶ್ ಮನೆಗೆ ಭೇಟಿ ಕೊಟ್ಟು ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದೆ. ಹತ್ಯೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು ಎಂದು ಸತ್ಯಶೋಧನ ಸಮಿತಿ ಆಗ್ರಹಿಸಿದೆ.

ಘಟನೆ ಸಂಬಂಧ ಈಗಾಗಲೇ 13 ಮಂದಿಯನ್ನು ಬಂಧಿಸಿದ್ದು ಪ್ರಮುಖ ಆರೋಪಿ ನಂದೀಶ್ ತಲೆ ಮರೆಸಿಕೊಂಡಿದ್ದು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಸತ್ಯಶೋಧನ ಸಮಿತಿಯ ಸದಸ್ಯ ಮುರುಳಿ ಕುಂದೂರು ದಿ ನ್ಯೂಸ್ ಕಿಟ್.ಇನ್ ಗೆ ತಿಳಿಸಿದ್ದಾರೆ.

ಹತ್ಯೆಯಾದ ಯುವಕರ ಕುಟುಂಬಗಳಿಗೆ ರಾಜ್ಯ ಸರ್ಕಾರ 20 ಲಕ್ಷ ಪರಿಹಾರವನ್ನು ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರುವ ಹಣವನ್ನು ಕೊಡಿಸಿಕೊಡಬೇಕು. ಕಳವು ಮಾಡಿದ್ದಾರೆಂಬ ಕಾರಣಕ್ಕೆ ಕೊಲೆಯೇ ಅಂತಿಮ ಪರಿಹಾರವಲ್ಲ. ದೇಶವನ್ನೇ ಲೂಟಿ ಮಾಡಿ ಆರಾಮವಾಗಿರುವವರನ್ನು ಪ್ರಶ್ನಿಸದೇ ಇರುವ ಸಂದರ್ಭದಲ್ಲಿ ಕಳವು ಮಾಡಿದರೆಂಬ ಕಾರಣಕ್ಕೆ ಕೊಲೆ ಮಾಡಿರುವುದು ಸರಿಯಲ್ಲ. ಹಾಗಾಗಿ ದಲಿತರಿಗೆ ರಕ್ಷಣೆ ನೀಡಬೇಕು. ಹತ್ಯೆಯಾದ ಯುವಕರ ಕುಟುಂಬಗಳಿಗೆ ನ್ಯಾಯ ದೊರೆಯದಿದ್ದರೆ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದು ಎಂದು ಮುರಳಿ ಕುಂದೂರು ಎಚ್ಚರಿಕೆ ನೀಡಿದ್ದಾರೆ.

ಸತ್ಯಶೋಧನ ಸಮಿತಿಯಲ್ಲಿ ರಘು, ಪಾಂಡುರಂಗಯ್ಯ, ಮಂಜೇಶ್, ಕೀರ್ತಿ, ನಟರಾಜ ಮೊದಲಾದವರು ಇದ್ದರು.

ಕಳವು ಮಾಲು ಹಂಚಿಕೆಯಲ್ಲಿ ಮೋಸ – ಹತ್ಯೆ ಸಂಚಿಗೆ ಕಾರಣ

ಕಳವು ಮಾಲು ಹಂಚಿಕೆ ಸಂಬಂಧ ನಂದೀಶ್ ಮತ್ತು ಇಬ್ಬರು ಗಿರೀಶ್ ರ ನಡುವೆ ಮನಸ್ಥಾಪ ಉಂಟಾಗಿತ್ತು. ಹೀಗಾಗಿ ಇತ್ತೀಚೆಗೆ ನಡೆದ ಜಾತ್ರೆಯ ಸಂದರ್ಭದಲ್ಲಿ ನಂದೀಶ್ ವೈಮನಸ್ಸು ಮರೆತು ಎಲ್ಲರೂ ಒಂದಾಗೋಣ ಎಂದು ಹೇಳಿದ್ದ. ಹಾಗೆಯೇ ದಲಿತ ಯುವಕರ ಹತ್ಯೆಗೆ ಮಾಸ್ಟರ್ ಪ್ಲಾನ್ ರೂಪಿಸಿದ್ದ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮಾಸ್ಟರ್ ಪ್ಲಾನ್ ಭಾಗವಾಗಿಯೇ ಮನೆಯಲ್ಲಿದ್ದ ಗಿರೀಶ್ ನನ್ನು ನಂದೀಶ್ ತೋಟವೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದಲೇ ತನಗೆ ಪರಿಚಯವಿರುವ ವ್ಯಕ್ತಿಗಳಿಗೆ ಕರೆ ಮಾಡಿ ಜನರನ್ನು ಕರೆಸಿಕೊಂಡಿದ್ದ ಎಂಬ ಬಗ್ಗೆಯೂ ಗ್ರಾಮಸ್ಥರು ಚರ್ಚೆ ನಡೆಸುತ್ತಿದ್ದಾರೆ.

ಹತ್ಯೆ ಘಟನೆ ಹಿನ್ನೆಲೆಯಲ್ಲಿ ಪೆದ್ದನಹಳ್ಳಿ ಗ್ರಾಮದ ಪುರುಷರೆಲ್ಲರು ತಲೆಮರೆಸಿಕೊಂಡು ಹೋಗಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಮಹಿಳೆಯರು ಮಾತ್ರ ಇದ್ದು, ಪೊಲೀಸರು ಇಂದು ಶಾಂತಿ ಸಭೆ ನಡೆಸಿ ಮಹಿಳೆಯರು ತಲೆಮರೆಸಿಕೊಂಡಿರುವವರನ್ನು ಕರೆಸಬೇಕು. ಇಲ್ಲದಿದ್ದರೆ ಬಂಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular