ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿಯಲ್ಲಿ ಸವರ್ಣೀಯರಿಂದ ಇಬ್ಬರು ದಲಿತ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಟ್ರಾಸಿಟಿ, ಕಿಡ್ನಾಪ್ ಮತ್ತು ಕೊಲೆ ಕೇಸುಗಳನ್ನು ಹಾಕಿದ್ದು ತನಿಖೆಯ ಭಾಗವಾಗಿ ಪ್ರಕರಣದಲ್ಲಿ ಭಾಗಿಯಾಗಿರುವರೆನ್ನಲಾದ 20ಕ್ಕೂ ಹೆಚ್ಚು ಮಂದಿಯನ್ನು ಪೊಲೀಸ್ ಠಾಣೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆದರೆ ಇದುವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಬ್ಬರು ಯುವಕರ ಹತ್ಯೆಯ ಹಿನ್ನೆಲೆಯಲ್ಲಿ ಪ್ರಮುಖ ಆರೋಪಿಗಳು ಪೆದ್ದನಹಳ್ಳಿ ಗ್ರಾಮವನ್ನು ತೊರೆದು ತಲೆಮರೆಸಿಕೊಂಡಿದ್ದಾರೆ. ಪ್ರಕರಣದಿಂದ ಹೊರಬರಲು ತೆರೆಮರೆಯ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರ ಮೇಲೆ ಇನ್ನಿಲ್ಲದ ಒತ್ತಡಗಳು ಬರುತ್ತಿವೆ. ಹಾಗಾಗಿ ಪೊಲೀಸರು ತನಿಖೆಯನ್ನು ನಿಧಾನಗೊಳಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಪೆದ್ದನಹಳ್ಳಿ ಗಿರೀಶ್ ಮತ್ತು ಮತ್ತೊಬ್ಬ ಗಿರೀಶ್ ಹತ್ಯೆಯಾಗಿ ಮೂರು ದಿನ ಕಳೆದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಇದಕ್ಕೆ ಒತ್ತಡಗಳು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಹತ್ಯೆ ಪ್ರಕರಣದಲ್ಲಿ 20 ಮಂದಿ ಭಾಗಿಯಾಗಿರುವ ಆರೋಪ ಕೇಳಿಬರುತ್ತಿದ್ದು, ಈ ಹತ್ಯೆ ಪ್ರಕರಣವನ್ನು ದೊಂಬಿ ಪ್ರಕರಣವನ್ನಾಗಿ ಮಾಡಿ ಇಡೀ ಪ್ರಕರಣವನ್ನು ಮುಚ್ಚಿಹಾಕುವಂತೆ ಪೊಲೀಸರ ಮೇಲೆ ಒತ್ತಡಗಳು ಬರುತ್ತಿವೆ ಎಂದು ದಲಿತ ಮುಖಂಡರು ಆರೋಪಿಸಿದ್ದಾರೆ.
ಅಭಿಷೇಕ್ ಪ್ರಕರಣವನ್ನೂ ಮುಚ್ಚಿ ಹಾಕಲಾಯಿತು. ಅದರಂತೆಯೇ ಈ ಹತ್ಯೆ ಪ್ರಕರಣವನ್ನು ಮುಚ್ಚಿಹಾಕಲು ಯತ್ನಗಳು ನಡೆಯುತ್ತಿವೆ. ಪ್ರಕರಣದಲ್ಲಿ ಒಕ್ಕಲಿಗರು, ಲಿಂಗಾಯತರು ಮತ್ತು ದಲಿತರೂ ಸೇರಿದ್ದಾರೆ. ಇದೊಂದು ವ್ಯವಸ್ಥಿತ ತಂತ್ರ. ಪ್ರಕರಣ ಮುಚ್ಚಿಹಾಕುವುದಕ್ಕೆ ಬೇಕಾದ ವೇದಿಕೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಹಾಗಾಗಿ ತನಿಖಾಧಿಕಾರಿ ಒತ್ತಡಕ್ಕೆ ಮಣಿಯಬಾರದು ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.