Friday, November 22, 2024
Google search engine
Homeಮುಖಪುಟಗುಬ್ಬಿಯ ದಲಿತ ಯುವಕರ ಹತ್ಯೆ ಪ್ರಕರಣ - ನಿಷ್ಪಕ್ಷಪಾತ ತನಿಖೆಗೆ ದಲಿತ ಮುಖಂಡರ ಆಗ್ರಹ

ಗುಬ್ಬಿಯ ದಲಿತ ಯುವಕರ ಹತ್ಯೆ ಪ್ರಕರಣ – ನಿಷ್ಪಕ್ಷಪಾತ ತನಿಖೆಗೆ ದಲಿತ ಮುಖಂಡರ ಆಗ್ರಹ

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಕಳವು ಆರೋಪದ ಮೇರೆಗೆ ಇಬ್ಬರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿರುವ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಬೇಕು. ಹತ್ಯೆಯಾಗಿರುವ ಯುವಕರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ನೀಡಬೇಕು. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಲಿತ ನಾಯಕರು ಆಗ್ರಹಿಸಿದ್ದಾರೆ.

ಗುಬ್ಬಿ ತಾಲ್ಲೂಕು ಪೆದ್ದನಹಳ್ಳಿಯಲ್ಲಿ ಮೂರು ದಿನಗಳ ಹಿಂದೆ ಪಂಪ್ ಸೆಟ್ ಮೋಟರ್ ಕಳವು ಮಾಡಲು ಬಂದಿದ್ದಾರೆ ಎಂಬ ಆರೋಪದ ಮೇಲೆ ಮಂಚೇನಹಳ್ಳಿ ಗಿರೀಶ್ ಮತ್ತು ಪೆದ್ದನಹಳ್ಳಿಯ ಗಿರೀಶ್ ಮೇಲೆ ಪೆದ್ದನಹಳ್ಳಿಯ ಗ್ರಾಮದ ಕೆಲವರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲ ಕಳವು ಆರೋಪ ಹೊತ್ತ ಇಬ್ಬರು ಯುವಕರನ್ನು ಗ್ರಾಮದ ಪಕ್ಕದ ಕೆರೆಯಲ್ಲಿ ಎಸೆದು ಪರಾರಿಯಾಗಿದ್ದರು.

ಕೆರೆಯ ನೀರಿನಲ್ಲಿ ಓರ್ವ ಮೃತಪಟ್ಟಿದ್ದರೆ, ಕೆರೆ ನೀರಿನಿಂದ ಹೊರಬಂದ ಯುವಕ ಕೆರೆಯ ಅಂಗಳದಲ್ಲಿ ಸಾವನ್ನಪ್ಪಿದ್ದಾರೆ. ಗುಬ್ಬಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಸಾಮಾಜಿಕ ಹೋರಾಟಗಾರ, ಉಪನ್ಯಾಸಕ ಕೊಟ್ಟಶಂಕರ್ ದಿ ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿ ಗುಬ್ಬಿಯಲ್ಲೇ ದಲಿತರ ಹತ್ಯೆ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಇಬ್ಬರು ದಲಿತ ಯುವಕರ ಹಲ್ಲೆ-ಹತ್ಯೆ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕು. ಹತ್ಯೆಯಾದ ಯುವಕರ ಮೇಲೆ ಕಳ್ಳತನ ಆರೋಪ ಹೊರಿಸಿ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಯುತ್ತಿದ್ದು, ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಬೇಕು. ಹತ್ಯೆಯಾದ ಯುವಕರಿಬ್ಬರು ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಬೇಕು. ಗುಬ್ಬಿಯಲ್ಲೇ ಇಂತಹ ಪ್ರಕರಣಗಳು ನಡೆಯುತ್ತಿದ್ದು ಆತಂಕದ ವಾತಾವರಣ ಸೃಷ್ಟಿಸುವಂತೆ ಮಾಡಿದೆ. ತಪ್ಪು ಯಾರೇ ಮಾಡಿರಲಿ ಅವರಿಗೆ ಕಾನೂನು ರೀತಿ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕೊಟ್ಟ ಶಂಕರ್ ಒತ್ತಾಯಿಸಿದರು.

ಕವಿ ಮತ್ತು ಸಾಮಾಜಿಕ ಚಿಂತಕ ಹರ್ಷಕುಮಾರ್ ಕುಗ್ವೆ ಫೇಸ್ ಬುಕ್ ನಲ್ಲಿ ಗುಬ್ಬಿ ಘಟನೆಯನ್ನು ಖಂಡಿಸಿದ್ದಾರೆ.

ಗುಬ್ಬಿ ತಾಲ್ಲೂಕಿನ ಲಿಂಗಾಯತ ಮತ್ತು ತಿಗಳ ಜಾತಿಗಳ ಜನರು ತಲೆ ತಗ್ಗಿಸಬೇಕು. ನಾಲ್ಕು ವರ್ಷಗಳ ಹಿಂದೆ ಅಭಿಶೇಕ್ ಎಂಬ ದಲಿತ ಯುವಕನನ್ನು ತಿಗಳ ಜಾತಿಯ ಗೂಂಡಾಗಳು ಬೆತ್ತಲೆ ಮಾಡಿ ಚಪ್ಪಲಿ ಹಾರ ಹಾಕಿ ಅಮಾನುಷವಾಗಿ ಹಲ್ಲೆ ಮಾಡಿ ಅದನ್ನು ವಿಡಿಯೋ ಮಾಡಿದ್ದರು. ಈ ಘಟನೆಯ ವಿರುದ್ದ ಒಂದು ದೊಡ್ಡ ಪ್ರತಿಭಟನೆ ಚಲೋ ತುಮಕೂರು ಮೂಲಕ ನಡೆದಿತ್ತು.

ನಮ್ಮ ಪ್ರತಿಭಟನೆ ಕಾರಣದಿಂದ ಒಂದು ಮಟ್ಟದ ಕಾನೂನಿನ ನೆರವು ದಲಿತ ಯುವಕನಿಗೆ ಸಿಕ್ಕಿತ್ತು. ಇದೀಗ ಗುಬ್ಬಿಯ ಲಿಂಗಾಯತ ಸಮುದಾಯದ ಕೆಲವು ಗೂಂಡಾಗಳು ಇಬ್ಬರು ದಲಿತರ ಮೇಲೆ ಅಮಾನುಷ ವಿಕೃತಿ ಮೆರೆದು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ಕಾನೂನು ಸಚಿವ ಮಾಧುಸ್ವಾಮಿಗೆ ನಿಜಕ್ಕೂ ಕಾನೂನು ಸಂವಿಧಾನದ ಮೇಲೆ ಗೌರವ ಇದ್ದರೆ ಈ ನೀಚ ಹಂತಕರನ್ನು ತನ್ನ ಜಾತಿಯವರು ಎಂಬ ಕಾರಣಕ್ಕೆ ರಕ್ಷಣೆ ಕೊಡದೆ ಕೊಲೆಗಡುಕರಿಗೆ ಜೀವಾವಧಿ ಸಜೆ ಆಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇಂತಹ ವಿಕೃತರ ಕೃತ್ಯಗಳನ್ನು ಲಿಂಗಾಯತ ಮಠಗಳು ತೀವ್ರವಾಗಿ ಖಂಡಿಸಿ ತಾವು ನಿಜಕ್ಕೂ ಬಸವಾದಿ ಶರಣರ ಆಶಯಗಳನ್ನು ಇಟ್ಟುಕೊಂಡಿದ್ದೇಔಎ ಎಂದು ಸಾರಬೇಕು. ಒಂದು ಕಡೆ ಆರ್ಯ ಜನಾಂಗವಾದಿ ಆರ್.ಎಸ್.ಎಸ್. ಸಂಘಟಿಸುತ್ತಿರುವ ಮುಸ್ಲೀಮರ ಮೇಲಿನ ಅಮಾನವೀಯ ಆಕ್ರಮಣಗಳು ಮತ್ತೊಂದೆಡೆ ದಲಿತರ ಮೇಲೆ ಶೂದ್ರಬ್ರಾಮಣರು ನಡೆಸುವ ಹಿಂಸೆ ಕಗ್ಗೊಲೆಗಳು… ಈ ನಾಡಿಗೆ ಉಳಿಗಾಲವಿದೆಯೇ ಎಂದು ಕುಗ್ವೆ ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular