ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಿ ನಮ್ಮ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ದೇಶದ ರೈತರ ಪರ ಹೋರಾಟ ಮಾಡಿದ ವಿಚಾರವಾಗಿ ನಮ್ಮ ಮೇಲೆ ದೂರು ದಾಖಲಿಸಲಾಗಿದೆ ಎಂದರು.
20-01-2021ರಂದು ಪ್ರೀಡಂ ಪಾರ್ಕ್ ನಲ್ಲಿ 10 ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿದ್ದು, ಈ ಸಂಬಂಧ ವಿಪತ್ತು ನಿರ್ವಹಣೆ ಕಾಯ್ದೆ ಅಡಿಯಲ್ಲಿ 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊದಲ ಆರೋಪಿ ನಾನಾಗಿದ್ದು, ಉಳಿದಂತೆ ಸಲೀಂ ಅಹಮದ್, ಈಶ್ವರ್ ಖಂಡ್ರೆ, ಮಂಜುನಾಥ್, ಶಫಿವುಲ್ಲಾ ಹಾಗೂ ಬಸನಗೌಡ ಬಾದರ್ಲಿ ಅವರ ಹೆಸರನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ನಾವು ಕಾನೂನು ಗೌರವಿಸಿ ಜಾಮೀನು ಪಡೆದು ಬಂದಿದ್ದೇವೆ. ಅದು ಬೇರೆ ವಿಚಾರ. ಆದರೆ ಪ್ರತಿಯೊಂದು ಪ್ರಕರಣದಲ್ಲೂ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಲಾಗುತ್ತಿದೆ. ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲೂ ರಾಮನಗರ, ಕನಕಪುರ ಮತ್ತು ಬೆಂಗಳೂರಿನಲ್ಲಿ ಕೆಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಟೀಕಿಸಿದರು.
ನಮಗೆ ತೊಂದರೆ ನೀಡಿ, ಕೋರ್ಟ್ ಗೆ ಅಲೆಸಬೇಕೆಂಬ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ರಾಘವೇಂದ್ರ ಅವರು 144 ಸೆಕ್ಷನ್ ಉಲ್ಲಂಘನೆ ಮಾಡಿದ್ದರೂ ಅವರ ಮೇಲೆ ಪ್ರಕರಣ ದಾಖಲಿಸಿಲ್ಲ. ಅಲ್ಲಿ ಕಾನೂನು ಇರಲಿಲ್ಲವೇ? ಅಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲವೇ ಎಂದು ಪ್ರಶ್ನಿಸಿದರು.
ನಾವು ಹೋರಾಟ ಮಾಡಿದ ಪರಿಣಾಮ ಪ್ರಧಾನಿಗಳು ಕರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆದರು. ರಾಜ್ಯದಲ್ಲಿ ಇನ್ನೂ ಕಾಯ್ದೆ ಹಿಂಪಡೆದಿಲ್ಲ. ರೈತರ ಪರ ದನಿ ಎತ್ತುವ ಕಾಂಗ್ರೆಸ್ ದನಿ ಅಡುಗಿಸುವ ಪ್ರಯತ್ನ ಇದಾಗಿದೆ ಎಂದು ಆಪಾದಿಸಿದರು.
ಪಿಎಸ್ಐ ನೇಮಕಾತಿ ಹಗರಣವನ್ನು ನಾವೇ ಮೊದಲು ಬೆಳಕಿಗೆ ತಂದಿದ್ದೇವೆ. ಹಗರಣ ನಡೆದ ಶಿಕ್ಷಣ ಸಂಸ್ಥೆ ಸಂಸ್ಥಾಪಕರು, ಗೃಹ ಸಚಿವರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿರುವ ಪೋಟೋಗಳು ಬಂದಿವೆ. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೆ ಮೋಸ ಆಗಿದೆ. ಪರೀಕ್ಷೆಯಲ್ಲಿ ಲಕ್ಷಲಕ್ಷ ರೂಪಾಯಿ ಹಣ ಕೊಟ್ಟಿರುವ ವರದಿ ಬಂದಿದೆ. ಇದೊಂದು ಭ್ರಷ್ಟ ಸರ್ಕಾರ ಎಂದು ದೂರಿದರು.