ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಬುಗಡೂರು-ಹುಸೇನ್ ಪುರ ರಸ್ತೆ ಹದಗೆಟ್ಟು ಹೋಗಿದೆ. ಜನ-ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದು ರಸ್ತೆ ದುರಿಸ್ತಿ ಮಾಡಿಸಿಕೊಡಬೇಕೆಂದು ಮನವಿ ಮಾಡಿದ ಯುವಕನೊಬ್ಬನಿಗೆ ಪಾವಗಡ ಶಾಸಕ ವೆಂಕಟರವಣಪ್ಪ ಕಪಾಳಕ್ಕೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಏಪ್ರಿಲ್ 19ರಂದು ಪಾವಗಡ ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲೇ ಶಾಸಕ ವೆಂಕಟರವಣಪ್ಪ ಯುವಕನಿಗೆ ಮೂರು ಬಾರಿ ಕಪಾಳಕ್ಕೆ ಥಳಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಯುವಕ ರಸ್ತೆ ಸರಿಯಿಲ್ಲ. ಸಾಕಷ್ಟು ಹಾಳಾಗಿ ಹೋಗಿದೆ. ಓಡಾಡಲು ಕಷ್ಟವಾಗುತ್ತಿದೆ. ನೀವು ರಸ್ತೆಗಳನ್ನು ದುರಸ್ತಿ ಮಾಡಿಸಿಲ್ಲ. ಮೂರು ಬಾರಿ ಶಾಸಕರಾಗಿದ್ದೀರಿ ಎಂದು ಯುವಕ ಶಾಸಕರನ್ನು ಪ್ರಶ್ನಿಸುತ್ತಾನೆ.
ಇದರಿಂದ ಸಿಟ್ಟಿಗೆದ್ದ ಶಾಸಕ ವೆಂಕಟರವಣಪ್ಪ, ನೀನು ಈಗ್ಲೇ ಕೇಳಬೇಕಿತ್ತಾ ಬೇರೆ ಟೈಂ ಸಿಗಲಿಲ್ಲವೇ? ಎಲ್ಲರ ಎದುರಿಗೆ ಕೇಳುತ್ತಿಯಾ, ನನ ಮಗನೆ ಎಂದು ಯುವಕನ ಕಪಾಳಕ್ಕೆ ಹೊಡೆದರೆಂದು ಹೇಳಲಾಗಿದೆ.
ಯುವಕನಿಗೆ ಶಾಸಕರು ಕಪಾಳಕ್ಕೆ ಹೊಡೆಯುತ್ತಿದ್ದರೂ ಕೆಲವರು ಪೊಗುರು ಮಾತು ಆಡ್ಬೇಡವಲೇ ಎಂದು ಯುವಕನಿಗೆ ಬುದ್ದಿವಾದ ಹೇಳುತ್ತಿರುವುದು ಮತ್ತು ಮತ್ತೆ ಕೆಲವರು ಸುಮ್ಮನೇ ನೋಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಯುವಕ ನಾಗೇನಹಳ್ಳಿ ಗ್ರಾಮದವನೆಂದು ಹೇಳಲಾಗಿದ್ದು ಆತ ತಾಲ್ಲೂಕು ಕಚೇರಿ ಆವರಣದಲ್ಲಿ ಶಾಸಕರನ್ನು ಪ್ರಶ್ನಿಸಿರುವುದು ವೆಂಕಟರವಣಪ್ಪ ಮತ್ತು ಉಳಿದವರಿಗೆ ಸಿಟ್ಟೇರಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಯುವಕನ ಮಾತಿಗೆ ಶಾಸಕರು ಸಂಯಮದಿಂದ ಉತ್ತರಿಸಬೇಕಿತ್ತು. ಆದರೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ವೆಂಕಟರವಣಪ್ಪ ಸಿಟ್ಟಾಗಿ ಯುವಕನಿಗೆ ಕಪಾಳಕ್ಕೆ ಹೊಡೆದಿದ್ದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ