Thursday, September 19, 2024
Google search engine
Homeಜಿಲ್ಲೆಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತುಮಕೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ತುಮಕೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

ರಾಜ್ಯ ಬಿಜೆಪಿ ಸರ್ಕಾರದ 40ರಷ್ಟು ಕಮಿಷನ್ ದಂಧೆಯನ್ನು ಖಂಡಿಸಿ ಹಾಗೂ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

ಟೌನ್ ಹಾಲ್ ವೃತ್ತದಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸರ್ಕಾರ ಮತ್ತು ಕೆ.ಎಸ್.ಈಶ್ವರಪ್ಪ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ 40ರಷ್ಟು ಕಮಿಷನ್ ನೀಡಬೇಕೆಂದು ಸ್ವತಃ ಗುತ್ತಿಗೆದಾರರೇ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟ ಬಿಜೆಪಿ ಸರ್ಕಾರ ರಾಜ್ಯದಿಂದ ತೊಲಗಬೇಕು. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಹಿಂದೆ ಬಿಜೆಪಿ ಮುಖ್ಯಮಂತ್ರಿಗಳು ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿದ್ದರು. ಈಗ ಸಚಿವರು ಸಹ ಜೈಲಿಗೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಂಡು ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ದ ಎಫ್ಐಆರ್ ದಾಖಲಾಗಿದ್ದು ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಮುಖಂಡನಾಗಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವಂತಹ ದಯನೀಯ ಸ್ಥಿತಿ ಬಿಜೆಪಿ ಸರ್ಕಾರದಲ್ಲಿದೆ. ಇದು ಆ ಪಕ್ಷ ಮತ್ತು ಸರ್ಕಾರಕ್ಕೆ ಗೌರವ ತರುವುದಿಲ್ಲ ಎಂದು ಟೀಕಿಸಿದರು.

ಭ್ರಷ್ಟಾಚಾರದ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಈಶ್ವರಪ್ಪ ಬಗ್ಗೆ ಮುಖ್ಯಮಂತ್ರಿಗಳು ನೀಡುತ್ತಿರುವ ಹೇಳಿಕೆ ಗಮನಿಸಿದರೆ ಈಗಾಗಲೇ ಈಶ್ವರಪ್ಪ ನಿರ್ದೋಷಿ ಎಂದು ಅವರೇ ತೀರ್ಮಾನ ಮಾಡಿದಂತೆ ಕಂಡುಬರುತ್ತಿದೆ. ಮುಖ್ಯಮಂತ್ರಿಗಳು ಇಂತಹ ಹೇಳಿಕೆ ನೀಡುವುದು ಬಿಟ್ಟು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದರು.

ದೇಶದ ಜನರ ಖಾತೆಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದ ಪ್ರಧಾನಿ ಜನರ ಖಾತೆಗೆ ಹಣ ಹಾಕುವುದಿರಲಿ, ಇದ್ದ ಉದ್ಯೋಗವನ್ನು ಕಿತ್ತುಕೊಂಡು ನಿರುದ್ಯೋಗ ಸಮಸ್ಯೆ ತಾಂಡವವಾಡುವಂತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಡಾ.ರಫೀಕ್ ಅಹಮದ್ ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಮತ್ತು ಪತ್ನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮಾಜಿ ಶಾಸಕ ಆರ್.ನಾರಾಯಣ್, ಕೆ.ಷಡಕ್ಷರಿ, ಬಿ.ಬಿ. ರಾಮಸ್ವಾಮಿ ಗೌಡ ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡರಾದ ಹೊನ್ನಗಿರಿಗೌಡ, ಚೌದ್ರಿರಂಗಪ್ಪ, ಇಕ್ಬಾಲ್ ಅಹಮದ್, ಅತೀಕ್ ಅಹಮದ್, ಲೋಕೇಶ್ವರ್, ಕೆಂಚಮಾರಯ್ಯ, ಸೀಮೆಂಟ್ ಮಂಜುನಾಥ್, ಮೆಹಬೂಬ ಪಾಷಾ, ಆಟೋ ರಾಜು, ಪಾಲಿಕೆ ಸದಸ್ಯರಾದ ಮಹೇಶ್, ಶಕೀಲ್ ಅಹಮದ್, ರೂಪಶ್ರೀ ಶೆಟ್ಟಳ್ಳಯ್ಯ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular