ಸಿಪಿಎಂ ಪಕ್ಷದಿಂದ 2 ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದ ಜಿ.ವಿ.ಶ್ರೀರಾಮರೆಡ್ಡಿ ಅವರು ನಿಧನರಾದ ಸಂಗತಿ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಟ್ವೀಟ್ ಮಾಡಿರುವ ದೇವೇಗೌಡ, ಶ್ರೀರಾಮರೆಡ್ಡಿ ಆತ್ಮಕ್ಕೆ ಚಿರಶಾಂತಿ ಸಿಗಲಿ, ಈ ದುಃಖವನ್ನು ಭರಿಸುವ ಶಕ್ತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ ಸಿಪಿಎಂ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ ಎಂದು ಸಂತಾಪ ಸೂಚಿಸಿದ್ದಾರೆ.
ಬಡವರು, ಕಾರ್ಮಿಕರು ಮತ್ತು ರೈತರ ಪರ ಹೋರಾಟಕ್ಕೆ ಜೀವನವನ್ನೇ ಮುಡಿಪಾಗಿಟ್ಟಿದ್ದ ರೆಡ್ಡಿಯವರು ಇತ್ತೀಚಿನ ವರ್ಷಗಳಲ್ಲಿ ಕೋಮುವಾದ ವಿರುದ್ಧ ಗಟ್ಟಿದನಿಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಇತ್ತೀಚೆಗೆ ಜಾತ್ಯತೀತ ಶಕ್ತಿಗಳ ಸಂಘಠನೆಗೆ ಪ್ರಯತ್ನ ನಡೆಸುತ್ತಿದ್ದ ಜಿ.ವಿ.ಶ್ರೀರಾಮರೆಡ್ಡಿ ಸಾವಿನಿಂದ ರಾಜ್ಯ ಒಬ್ಬ ಧೀಮಂತ ಹೋರಾಟಗಾರನನ್ನು ಮತ್ತು ವೈಯಕ್ತಿಕವಾಗಿ ನಾನು ಬಹುಕಾಲದ ಗೆಳೆಯನನ್ನು ಕಳೆದುಕೊಂಡಿದ್ದೇನೆ ಎಂದಿದ್ದಾರೆ.
ಅವರ ಕುಟುಂಬದ ಸದಸ್ಯರು ಮತ್ತು ಅನುಯಾಯಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ನಾಯಲ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿ, ಶ್ರೀರಾಮರೆಡ್ಡಿ ಅವರ ಅಗಲಿಕೆಯಿಂದ ರಾಜ್ಯದಲ್ಲಿ ನಡೆಯುತ್ತಿರುವ ವೈಚಾರಿಕ ಪರ ಹೋರಾಟದಲ್ಲಿ ದೊಡ್ಡ ಶೂನ್ಯವನ್ನೇ ಸೃಷ್ಟಿಸಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ದುಃಖವನ್ನು ಭರಿಸುವ ಶಕ್ತಿ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.
ಪ್ರಗತಿಪರ ಚಿಂತಕರು, ಕೃಷಿ-ಕಾರ್ಮಿಕರ ಪರ ಹೋರಾಟಗಾರರು ಹಾಗೂ ಮಾಜಿ ಶಾಸಕರಾದ ಕಾಮ್ರೇಡ್ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ನನಗೆ ತೀವ್ರ ದುಃಖ ಉಂಟುಮಾಡಿದೆ. ಸಿಪಿಎಂ ಪಕ್ಷದಿಂದ ಎರಡು ಬಾರಿ ಬಾಗೇಪಲ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು ಮಾದರಿ ಜನಪ್ರತಿನಿಧಿಯಷ್ಟೇ ಅಲ್ಲ ಅತ್ಯುತ್ತಮ ಸಂಸದೀಯ ಪಟುವೂ ಆಗಿದ್ದರು ಎಂದು ಹೇಳಿದ್ದಾರೆ.
ಹರಿದು ಬರುತ್ತಿರುವ ಜನಸಾಗರ:
ಶ್ರೀರಾಮರೆಡ್ಡಿ ಅವರ ನಿಧನದ ಸುದ್ದಿ ತಿಳಿಸಿ ಅವರ ಸಂಗಾತಿಗಳು, ಅಭಿಮಾನಿಗಳು, ಆಪ್ತರ ದಂಡೇ ಹರಿದುಬರುತ್ತಿದೆ. ಶ್ರೀರಾಮರೆಡ್ಡಿ ಅವರ ಪಾರ್ಥೀವ ಶರೀರದ ದರ್ಶನ ಪಡೆಯಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬಾಗೇಪಲ್ಲಿಯ ಸರ್ಕಾರಿ ಕಾಲೇಜು ಮೈದಾನಕ್ಕೆ ಬರುತ್ತಿದ್ದಾರೆ.